ನವದೆಹಲಿ: ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ಪುನರ್‌ರಚನೆ ಜುಲೈ 8ರಂದು ನಡೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಕುರಿತು ರಾಷ್ಟ್ರ ರಾಜಕೀಯದಲ್ಲಿಯೂ ಕೂಡಾ ಊಹಾಪೋಹಗಳು ಹರಿದಾಡುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಎರಡನೇ ಅವಧಿಯ ಮೊದಲನೆಯ ಸಚಿವ ಸಂಪುಟ ಪುನರ್ರಚನೆಯಾಗಿದ್ದು, ಈಗಾಗಲೇ ಬಹುತೇಕ ಸಂಸದರನ್ನು ನವದೆಹಲಿಗೆ ಕರೆಸಲಾಗಿದೆ. ಆದರೆ ಕ್ಯಾಬಿನೆಟ್ ಪುನರ್‌ರಚನೆ ಯಾವ ವೇಳೆ ನಡೆಯುತ್ತದೆ ಎಂಬುದರ ಅಧಿಕೃತ ಮಾಹಿತಿ ಇನ್ನೂ ಸಿಕ್ಕಿಲ್ಲ.
ಮತ್ತೊಂದೆಡೆ ಎರಡು ದಿನಗಳ ಹಿಮಾಚಲ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸಂಜೆ ನವದೆಹಲಿಗೆ ಮರಳಲಿದ್ದಾರೆ. ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲಿರುವ ಹಲವಾರು ಪಕ್ಷದ ಮುಖಂಡರಿಗೆ ಈಗಾಗಲೇ ದೆಹಲಿಯನ್ನು ತಲುಪಲು ಕರೆ ನೀಡಲಾಗಿದೆ.
ಮೋದಿ ಕ್ಯಾಬಿನೆಟ್‌ಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇರುವ ಜ್ಯೋತಿರಾಧಿತ್ಯ ಸಿಂಧಿಯಾ ಕೂಡ ಮಧ್ಯಪ್ರದೇಶದ ಇಂದೋರ್‌ಗೆ ಭೇಟಿ ನೀಡುವುದನ್ನು ನಿಲ್ಲಿಸಿ, ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ನೇಮಕ
ಮಾಜಿ ಕೇಂದ್ರ ಸಚಿವ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಸಹೋದರ ಪಶುಪತಿ ಪರಾಸ್, ಜೆಡಿಯು ನಾಯಕರಾದ ಆರ್‌ಸಿಪಿ ಸಿಂಗ್ ಮತ್ತು ರಾಜೀವ್ ರಂಜನ್, ಅಪ್ನಾ ದಳದ ಮುಖ್ಯಸ್ಥ ಅನುಪ್ರಿಯಾ ಪಟೇಲ್ ದೆಹಲಿಗೆ ತೆರಳುತ್ತಿದ್ದು, ಇವರಿಗೆಲ್ಲಾ ಕೇಂದ್ರ ಸಚಿವ ಸ್ಥಾನ ಕಾಯಂ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ವೇಳೆ ಕರ್ನಾಟಕಕ್ಕೂ ಸಚಿವ ಸ್ಥಾನ ಸಿಗುವುದೇ ಎಂಬುದು ಕುತೂಹಲ ಕೆರಳಿಸಿದೆ.