ನವದೆಹಲಿ: ಬಜೆಟ್ನಲ್ಲಿ ಕೇಂದ್ರ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ನೀಡಿದೆ. ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ 38,800 ಶಿಕ್ಷಕ ಮತ್ತು ಇತರ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2023 ಮಂಡಿಸಿದ್ದಾರೆ. ಈಗಾಗಲೇ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿರುವುದು ಗೊತ್ತಿರುವ ಸಂಗತಿ. ಈ ಹಿಂದೆ ಬಜೆಟ್ ಮಂಡನೆ ವೇಳೆ ನಿರುದ್ಯೋಗ ಹೋಗಲಾಡಿಸುವ ನಿಟ್ಟಿನಲ್ಲಿ ಮುಂದಿನ 5 ವರ್ಷದಲ್ಲಿ 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು ಸರ್ಕಾರದ ಗುರಿ ಎಂದು ಅವರು ಹೇಳಿದ್ದರು. ಈಗ ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಘೋಷಿಸಿದ್ದಾರೆ.
ಕಳೆದ ಬಾರಿ ಬಜೆಟ್ನಲ್ಲಿ ಮೇಕ್ ಇನ್ ಇಂಡಿಯಾ ಮೂಲಕ 60 ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಪಿಎಂ ಗತಿ ಶಕ್ತಿಯು ಆರ್ಥಿಕತೆಯನ್ನು ಮುಂದಕ್ಕೆ ಕರೆದೊಯ್ಯುತ್ತದೆ ಮತ್ತು ಯುವಕರಿಗೆ ಹೆಚ್ಚಿನ ಉದ್ಯೋಗಗಳು ಮತ್ತು ಅವಕಾಶಗಳನ್ನು ನೀಡುತ್ತದೆ. ಭಾರತದಲ್ಲಿ ಯುವಕರು, ಮಹಿಳೆಯರು ಮತ್ತು ಬಡವರ ಸಬಲೀಕರಣಕ್ಕೆ ಸರ್ಕಾರ ಒತ್ತು ನೀಡಿದೆ. ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆಯು ಆತ್ಮನಿರ್ಭರ ಭಾರತವನ್ನು ಯಶಸ್ವಿಯಾಗಿಸಲಿದೆ. ಮುಂದಿನ ಐದು ವರ್ಷಗಳಲ್ಲಿ 60 ಲಕ್ಷ ಹೊಸ ಉದ್ಯೋಗಗಳು ಮತ್ತು 30 ಲಕ್ಷ ಕೋಟಿ ಹೆಚ್ಚುವರಿ ಉತ್ಪಾದನೆಯನ್ನು ರಚಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದು ಕಳೆದ ಬಾರಿ ಬಜೆಟ್ನಲ್ಲಿ ಉದ್ಯೋಗದ ಬಗ್ಗೆ ಭರವಸೆ ನೀಡಿದ್ದರು. ಆದರೆ ಈ ಬಾರಿ ಬಜೆಟ್ನಲ್ಲಿ 10 ಲಕ್ಷ ಕೋಟಿ ರೂಪಾಯಿ ಉದ್ಯೋಗ ಸೃಷ್ಟಿಗೆ ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ನೀಡಿದ ಆರ್ಥಿಕ ಹೊಡೆತದಿಂದಾಗಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ವಿದ್ಯಾವಂತ ನಿರುದ್ಯೋಗಿಗಳಿಗೆ ಈ ಬಜೆಟ್ ಒಂದಷ್ಟು ಆಶಾಕಿರಣ ನೀಡುವಂತೆ ಕಾಣುತ್ತಿದೆ. ಇದಲ್ಲದೇ ಕೇಂದ್ರ ಸರ್ಕಾರದ ನಾನಾ ಯೋಜನೆಗಳ ಮೂಲಕ ಹೆಚ್ಚು ಉದ್ಯೋಗ ಸೃಷ್ಟಿಯ ಆಲೋಚನೆ ಇರುವುದರಿಂದ ಶೀಘ್ರದಲ್ಲೇ ಇಷ್ಟು ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯೆಡೆಗೆ ಈ ಬಜೆಟ್ ದೃಷ್ಟಿ ನೆಟ್ಟಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿದರೆ ಸಾಕು ಎನ್ನುವಂತಾಗಿದೆ.
ಓದಿ: ನೀವು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದೀರಾ? ಹಾಗಾದರೆ ಸರಳ ಬದುಕಿಗೆ ಹೀಗೆ ಮಾಡಿ!