ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ರೈತರ ನಿಲುವಿಗೆ ಸಂಪೂರ್ಣವಾಗಿ ಬದ್ಧವಾಗಿದ್ದು, ಹಲವಾರು ಕೃಷಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನಾವು ಅನ್ನದಾತರ ಪರವಾಗಿದ್ದೇವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದರು.
ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆ, ಇಂದು ರೈತ ನಾಯಕರ ಜೊತೆ ದೆಹಲಿಯ ವಿಜ್ಞಾನ ಭವನದಲ್ಲಿ 5ನೇ ಸುತ್ತಿನ ಮಾತುಕತೆ ನಡೆಯಿತು. ಬಳಿಕ ಮಾತನಾಡಿದ ಅವರು, ಸರ್ಕಾರವು ರೈತರು ಕೋರಿದ ಎಲ್ಲ ಅಂಶಗಳನ್ನು ಪರಿಗಣಿಸುತ್ತದೆ. ರೈತ ಮುಖಂಡರಿಂದ ಸಲಹೆಗಳನ್ನು ಪಡೆದರೆ, ಪರಿಹಾರವನ್ನು ಕಂಡುಕೊಳ್ಳುವಲ್ಲಿ ನಮಗೆ ಸುಲಭವಾಗಲಿದೆ ಎಂದರು.
ಕೊರೊನಾ ಹಾಗೂ ಶೀತ ಹವಾಮಾನ ಇರುವ ಹಿನ್ನೆಲೆಯಲ್ಲಿ, ವೃದ್ಧರು ಮತ್ತು ಮಕ್ಕಳನ್ನು ಮನೆಗೆ ವಾಪಸ್ ಕಳುಹಿಸುವಂತೆ ನಾವು ಕಿಸಾನ್ ಯೂನಿಯನ್‌ಗಳಿಗೆ ವಿನಂತಿಸುತ್ತೇವೆ ಎಂದು ತಿಳಿಸಿದರು.
ರೈತರು ಆಂದೋಲನದ ಹಾದಿಯನ್ನು ಬಿಟ್ಟು, ಚರ್ಚೆಯ ಹಾದಿಗೆ ಹಿಡಿಯಲು ನಾನು ಬಯಸುತ್ತೇನೆ. ಸರ್ಕಾರ ಅವರೊಂದಿಗೆ ಹಲವಾರು ಸುತ್ತಿನ ಮಾತುಕತೆ ನಡೆಸಿದ. ಮತ್ತು ಪರಿಹಾರಕ್ಕಾಗಿ ಹೆಚ್ಚಿನ ಚರ್ಚೆಗೆ ಸಿದ್ಧವಾಗಿದೆ ಎಂದು ತಿಳಿಸಿದರು.
ಎಪಿಎಂಸಿಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಸಿದ್ಧವಾಗಿದೆ. ಎಪಿಎಂಸಿಗಳ ಬಗ್ಗೆ ಯಾರಾದರೂ ತಪ್ಪು ಕಲ್ಪನೆ ಹೊಂದಿದ್ದರೆ, ಅದನ್ನು ಸ್ಪಷ್ಟಪಡಿಸಲು ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದರು.