ಗುವಾಹಟಿ(ಅಸ್ಸೋಂ): ಎಫ್ಐಆರ್ ದಾಖಲಿಸಲು, ವಿವಿಧ ಪ್ರಕರಣಗಳನ್ನು ಬಗೆಹರಿಸಲು ಪೊಲೀಸರು ಲಂಚ ಪಡೆದುಕೊಳ್ಳುತ್ತಾರೆಂಬ ಆರೋಪ ಕೇಳಿ ಬರುತ್ತಲೇ ಇರುತ್ತವೆ. ಇದಕ್ಕೆ ಪುಷ್ಠಿ ನೀಡುವ ರೀತಿಯಲ್ಲೇ ಅಸ್ಸೋಂನಲ್ಲಿ ಘಟನೆವೊಂದು ನಡೆದಿದೆ. ಪೊಲೀಸರಿಗೆ ಲಂಚ ನೀಡಲು ಸಾಧ್ಯವಾಗದ ಕಾರಣ ವಿವಾಹಿತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಮ್ರೂಪ್ ಜಿಲ್ಲೆಯ ಅಮಿಂಗ್ಗಾಂವ್ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ.
ಗುರುವಾರ ರಾತ್ರಿ ಭುವನೇಶ್ವರ್ ಪಾಲ್ ತನ್ನ ಪತ್ನಿ ಜೊತೆ ಸಣ್ಣ ಜಗಳವಾಡಿಕೊಂಡಿದ್ದಾನೆ. ಈ ವಿಚಾರವಾಗಿ ಆತನ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ. ಆಕೆಯ ಸಮ್ಮುಖದಲ್ಲೇ ರಾಜಿ ಸಂಧಾನ ಮಾಡುವ ಮೂಲಕ ಸಮಸ್ಯೆ ಬಗೆಹರಿಸಲು ಪೊಲೀಸರು ಭುವನೇಶ್ವರ್ ಅವರನ್ನು ಠಾಣೆಗೆ ಕರೆಸಿಕೊಂಡಿದ್ದಾರೆ. ಈ ವೇಳೆ ಮಾತುಕತೆ ಮೂಲಕ ಇಬ್ಬರ ನಡುವಿನ ಸಮಸ್ಯೆ ಬಗೆಹರಿಸಲಾಗಿದೆ.
40 ಸಾವಿರ ರೂ. ಬೇಡಿಕೆ ಇಟ್ಟ ಅಧಿಕಾರಿ: ಇಬ್ಬರ ನಡುವಿನ ಸಮಸ್ಯೆ ಇತ್ಯರ್ಥಗೊಂಡ ಬಳಿಕ, ಭುವನೇಶ್ವರ್ನನ್ನು ಜೈಲಿಗೆ ಕಳುಹಿಸದಿರಲು 40 ಸಾವಿರ ರೂಪಾಯಿಗೆ ಪೊಲೀಸ್ ಅಧಿಕಾರಿಯೋರ್ವ ಬೇಡಿಕೆ ಇಟ್ಟಿದ್ದಾನೆ. ಹಣ ನೀಡದಿದ್ದರೆ ಜೈಲಿಗೆ ಕಳುಹಿಸುವುದಾಗಿ ಯುವಕನಿಗೆ ಬೆದರಿಕೆ ಹಾಕಿದ್ದಾರಂತೆ. ಹಣ ಜೋಡಿಸಲುವಲ್ಲಿ ವಿಫಲನಾಗಿರುವ ಆತ ಮನೆಯಲ್ಲಿ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಕುಟುಂಬಸ್ಥರು ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಮಡಿಕೇರಿ: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಎಫ್ಡಿಎ
ಇಂದು ಬೆಳಗ್ಗೆ ಭುವನೇಶ್ವರ್ ಶವ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗ್ತಿದೆ.