ಹರ್ಷಿಲ್ (ಉತ್ತರಾಖಂಡ್): ಲಮ್ಖಗಾ ಪಾಸ್ ಬಳಿ ಎರಡು ಪ್ರತ್ಯೇಕ ಸ್ಥಳಗಳಿಂದ ನಾಪತ್ತೆಯಾಗಿದ್ದ ಎರಡು ಟ್ರೆಕ್ಕಿಂಗ್ ತಂಡಗಳಿಂದ ಒಟ್ಟು 12 ಚಾರಣಿಗರ ಶವಗಳನ್ನು ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ಆರು ಮಂದಿಯನ್ನು ರಕ್ಷಿಸಲಾಗಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಉತ್ತರಾಖಂಡದ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಅಶೋಕ್ ಕುಮಾರ್, ಉತ್ತರಾಖಂಡ್ ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ನಿಂದ ನಾಪತ್ತೆಯಾಗಿರುವವರಿಗೆ ಹರ್ಷಿಲ್‌ನಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಭಾಗದಲ್ಲಿ 11 ಮಂದಿ ಚಾರಣಿಗರು ನಾಪತ್ತೆಯಾಗಿದ್ದರು. ಈವರೆಗೆ ಏಳು ಚಾರಣಿಗರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದ್ದು, ಇಬ್ಬರು ಚಾರಣಿಗರನ್ನು ರಕ್ಷಿಸಲಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
11 ಮಂದಿ ಚಾರಣಿಗರ ಮತ್ತೊಂದು ತಂಡ ನಾಪತ್ತೆಯಾಗಿದೆ. ಈ ತಂಡದಲ್ಲಿ ಇದ್ದವರ ಐವರ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ನಾಲ್ವರು ಚಾರಣಿಗರನ್ನು ರಕ್ಷಿಸಲಾಗಿದೆ. ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ. ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಾಪತ್ತೆಯಾಗಿದ್ದ 22 ಚಾರಣಿಗರ ಪೈಕಿ 12 ಮಂದಿ ಮೃತದೇಹಗಳು ಪತ್ತೆಯಾಗಿವೆ. ಆರು ಚಾರಣಿಗರನ್ನು ರಕ್ಷಿಸಲಾಗಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಹೇಳಿದರು.
ಹಿಮಾಚಲ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (HPSDMA) ಇತ್ತೀಚಿನ ಮಾಹಿತಿ ಪ್ರಕಾರ, ಹಿಮಾಚಲದ ಕಡೆಯಿಂದ (ಕಿನ್ನೌರ್) ಎರಡು ಶವಗಳನ್ನು ಪತ್ತೆ ಹಚ್ಚಲಾಗಿದ್ದು, ಶವಗಳನ್ನು ತರಲು ಜಿಲ್ಲಾಡಳಿತವು ಸಾಂಗ್ಲಾ ಪೊಲೀಸ್ ಠಾಣೆಯಿಂದ ತಂಡವನ್ನು ನಿಯೋಜಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಚಿತ್ಕುಲ್‌ಗೆ ಸಂಪರ್ಕ ಕಲ್ಪಿಸುವ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಲಮ್ಖಗಾ ಪಾಸ್ ಬಳಿ ಚಾರಣದ ಮಾರ್ಗದಲ್ಲಿ ಪರ್ವತಾರೋಹಿಗಳು ಕಾಣೆಯಾಗಿದ್ದರು ಎಂದು ವರದಿಯಾಗಿತ್ತು. ಕಳೆದೊಂದು ವಾರದಲ್ಲಿ ಉತ್ತರಾಖಂಡ್ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಸುರಿದ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ 40ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.
ಇದನ್ನೂ ಓದಿ: Uttarakhand Flood: ಬಂಡೆಗಳ ನಡುವೆ ಸಿಲುಕಿದ ಕಾರು-Video