ಡೆಹ್ರಾಡೂನ್: ಬಿಜೆಪಿ ಮುಖಂಡನ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಆಗಿದ್ದ ಯುವತಿ ಅಂಕಿತಾ ಭಂಡಾರಿ ಸಾವಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಂಕಿತಾಳ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ, ಆಕೆಯ ಸಾವಿನಿಂದ ನನ್ನ ಮನಸಿಗೆ ತೀವ್ರ ನೋವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ನಾಯಕ ವಿನೋದ ಆರ್ಯ ಎಂಬಾತನ ಮಗ ಪುಲ್ಕಿತ್ ಆರ್ಯ ಮತ್ತು ಆತನ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಹಚರರು ಸೇರಿಕೊಂಡು ಅಂಕಿತಾಳನ್ನು 6 ದಿನಗಳ ಹಿಂದೆ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ಪೊಲೀಸ್ ಡಿಐಜಿ ಪಿ. ರೇಣುಕಾ ದೇವಿ ಅವರ ನೇತೃತ್ವದಲ್ಲಿ ವಿಶೇಷ ತನಿಕಾ ದಳ ರಚನೆ ಮಾಡಲಾಗಿದೆ. ಅಕ್ರಮವಾಗಿ ಕಟ್ಟಲಾದ ರೆಸಾರ್ಟ್ ವಿರುದ್ಧ ಕಳೆದ ರಾತ್ರಿಯೇ ಬುಲ್ಡೋಜರ್ ಕಾರ್ಯಾಚರಣೆಯನ್ನೂ ನಡೆಸಲಾಗಿದೆ. ಇಂಥ ಹೀನ ಕೃತ್ಯ ಎಸಗಿದ ಆರೋಪಿಗಳನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂದು ಸಿಎಂ ಧಾಮಿ ಟ್ವೀಟ್ನಲ್ಲಿ ಬರೆದಿದ್ದಾರೆ.
ಪೌರಿ ಜಿಲ್ಲೆಯ ಯಮಕೇಶ್ವರ ಬ್ಲಾಕ್‌ನಲ್ಲಿರುವ ಪುಲ್ಕಿತ್ ಆರ್ಯನ ವನತಾರಾ ರೆಸಾರ್ಟ್‌ನಲ್ಲಿ 19 ವರ್ಷದ ಅಂಕಿತಾ ಭಂಡಾರಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಸೆಪ್ಟೆಂಬರ್ 18 ರಂದು ಕಾಣೆಯಾದ ಈಕೆ ಚಿಲಾ ಶಕ್ತಿ ಕೆನಾಲ್ ಬಳಿ ಶನಿವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾಳೆ.
ಸೆಪ್ಟೆಂಬರ್ 18 ರ ರಾತ್ರಿ ಅಂಕಿತಾಳನ್ನು ತನ್ನ ಇಬ್ಬರು ಸಿಬ್ಬಂದಿಯೊಂದಿಗೆ ಬಂಡೆಯೊಂದಕ್ಕೆ ತಳ್ಳಿ ಕೊಂದಿರುವುದಾಗಿ ಆರ್ಯ ಒಪ್ಪಿಕೊಂಡಿದ್ದು, ಪುಲ್ಕಿತ್ ಆರ್ಯ ಮತ್ತು ಆತನ ಸಹಚರರನ್ನು ಪೌರಿ ಜಿಲ್ಲೆಯ ಯಮಕೇಶ್ವರ ಬ್ಲಾಕ್‌ನಲ್ಲಿರುವ ವನತಾರಾ ರೆಸಾರ್ಟ್‌ನಲ್ಲಿ ಬಂಧಿಸಿದ್ದಾರೆ. ಘಟನೆಯ ಕುರಿತು ಎಸ್‌ಐಟಿ ತನಿಖೆ ಆರಂಭಿಸಿದ ಬೆನ್ನಲ್ಲೇ ಉತ್ತರಾಖಂಡ ಸರ್ಕಾರ ಶುಕ್ರವಾರ ರಾತ್ರಿ ರೆಸಾರ್ಟ್ ಅನ್ನು ನೆಲಸಮಗೊಳಿಸಿದೆ.
ಪಕ್ಷದಿಂದ ಉಚ್ಛಾಟನೆ: ಉತ್ತರಾಖಂಡ್ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪುಲ್ಕಿತ್ ಆರ್ಯ ತಂದೆ ವಿನೋದ್ ಆರ್ಯ ಮತ್ತು ಅವರ ಸಹೋದರ ಅಂಕಿತ್ ಆರ್ಯ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ. ಪಕ್ಷದ ರಾಜ್ಯ ಮಾಧ್ಯಮ ಉಸ್ತುವಾರಿ ಮನ್ವೀರ್ ಸಿಂಗ್ ಚೌಹಾಣ್ ಈ ಮಾಹಿತಿ ನೀಡಿದ್ದಾರೆ. ಅಂಕಿತ್ ಆರ್ಯ ಅವರು ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ಆಯೋಗದ ಉಪಾಧ್ಯಕ್ಷರಾಗಿದ್ದರು.
ಇದನ್ನು ಓದಿ:ಏಳು ಜನರನ್ನು ಕೊಲ್ಲುವುದಾಗಿ ಫೇಸ್ಬುಕ್ನಲ್ಲಿ ಬೆದರಿಕೆ: ಹೆಣ್ಣು ಹುಟ್ಟಿದ್ದಕ್ಕೆ ಕೋಪ?