ನವದೆಹಲಿ: ಬ್ರಿಟನ್ನಲ್ಲಿರುವ ಲೌಬರೋ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಡಿಸೆಂಬರ್ 15ರಿಂದ ನಾಪತ್ತೆಯಾಗಿದ್ದಾರೆ. ಪೂರ್ವ ಲಂಡನ್ ಪ್ರದೇಶದಿಂದ ಜಿ. ಎಸ್. ಭಾಟಿಯಾ ಎಂಬ ವಿದ್ಯಾರ್ಥಿ ಕಾಣೆಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಈತನ ಪತ್ತೆಗಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ನೆರವನ್ನು ಕೇಳಿದ್ದಾರೆ.
ಭಾರತೀಯ ವಿದ್ಯಾರ್ಥಿ ಭಾಟಿಯಾ ಕುರಿತು ಮಾಹಿತಿ ಹಂಚಿಕೊಂಡಿರುವ ಮಂಜಿಂದರ್ ಸಿಂಗ್ ಸಿರ್ಸಾ, ಲೌಬರೋ ವಿಶ್ವವಿದ್ಯಾಲಯ ಮತ್ತು ಭಾರತೀಯ ಹೈಕಮಿಷನ್ ವಿದ್ಯಾರ್ಥಿಯ ಹುಡುಕಾಟಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ. "ಲೌಬರೋ ವಿಶ್ವವಿದ್ಯಾಲಯದ ವಿದ್ಯಾರ್ಥಿ ಜಿ ಎಸ್ ಭಾಟಿಯಾ ಡಿಸೆಂಬರ್ 15ರಿಂದ ಕಾಣೆಯಾಗಿದ್ದಾರೆ. ಕೊನೆಯದಾಗಿ ಈಸ್ಟ್ ಲಂಡನ್‌ನ ಕ್ಯಾನರಿ ವಾರ್ಫ್‌ನಲ್ಲಿ ಕಾಣಿಸಿಕೊಂಡಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರ ಗಮನಕ್ಕೆ ಮತ್ತು ಲೌಬರೋ ವಿಶ್ವವಿದ್ಯಾಲಯ ಹಾಗೂ ಲಂಡನ್ನಲ್ಲಿರುವ ಭಾರತದ ಹೈಕಮಿಷನ್ ವಿದ್ಯಾರ್ಥಿಯನ್ನು ಪತ್ತೆ ಮಾಡುವ ಪ್ರಯತ್ನಗಳಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುತ್ತೇವೆ'' ಎಂದು ಮಂಜಿಂದರ್ ಸಿಂಗ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಲ್ಲದೇ, ಮಂಜಿಂದರ್ ಸಿರ್ಸಾ, ಕಾಣೆಯಾದ ವಿದ್ಯಾರ್ಥಿ ಭಾಟಿಯಾ ಕಾಲೇಜು ಗುರುತಿನ ಚೀಟಿ, ನಿವಾಸದ ಪರವಾನಿಗೆ ಪ್ರತಿಯನ್ನು ಪೋಸ್ಟ್ ಮಾಡಿದ್ದಾರೆ. ಸಾರ್ವಜನಿಕರನ್ನು ಸಹ ಈ ಸುದ್ದಿ ಹಂಚಿಕೊಳ್ಳುವಂತೆ ಮನವಿ ಮಾಡಿರುವ ಅವರು, ವಿದ್ಯಾರ್ಥಿ ಕುರಿತು ಲಭ್ಯವಿರುವ ಯಾವುದೇ ಮಾಹಿತಿಯನ್ನು ಒದಗಿಸಲು ಎರಡು ಸಂಪರ್ಕ ಸಂಖ್ಯೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ಡಿಸಿಎಂ ಆಗಿ ದಿಯಾ ಕುಮಾರಿ, ಪ್ರೇಮ್ಚಂದ್ ಪ್ರಮಾಣವಚನ ಸ್ವೀಕಾರ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ