ನವದೆಹಲಿ: ಮುಖ್ಯಮಂತ್ರಿ ಏಕನಾಥ್ ಶಿಂದೆ ಗುಂಪಿನ ವಿಪ್ನ್ನು ಶಿವಸೇನೆಯ ವಿಪ್ ಎಂದು ಹೊಸದಾಗಿ ನೇಮಕಗೊಂಡ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಮಾನ್ಯತೆ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ಶಿವಸೇನೆ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಗುಂಪು ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಉದ್ಧವ್ ಠಾಕ್ರೆ ಇನ್ನೂ ಶಿವಸೇನೆ ಪಕ್ಷದ ಮುಖ್ಯಸ್ಥರಾಗಿಯೇ ಇದ್ದಾರೆ. ಶಿಂದೆ ನಾಮನಿರ್ದೇಶನ ಮಾಡಿದ ವಿಪ್ಗೆ ಮಾನ್ಯತೆ ನೀಡಲು ಹೊಸದಾಗಿ ನೇಮಕಗೊಂಡ ಸ್ಪೀಕರ್‌ಗೆ ಅಧಿಕಾರವಿಲ್ಲ ಎಂದು ಠಾಕ್ರೆ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ ಅವರ ಪೀಠಕ್ಕೆ ತಿಳಿಸಿದರು.
ಈ ಕ್ರಮವು ಸುಪ್ರೀಂ ಕೋರ್ಟ್‌ನ ವಿಚಾರಣೆಯ ಯಥಾಸ್ಥಿತಿಯನ್ನು ಬದಲಾಯಿಸುತ್ತಿದೆ ಎಂದು ಅವರು ಹೇಳಿದರು. "ವಿಪ್‌ಗಳನ್ನು ಅಂಗೀಕರಿಸಲು ಸ್ಪೀಕರ್‌ಗೆ ಅಧಿಕಾರವಿಲ್ಲ. ಇದು ಈ ನ್ಯಾಯಾಲಯದ ವಿಚಾರಣೆಯ ಯಥಾಸ್ಥಿತಿಯನ್ನು ಬದಲಾಯಿಸುತ್ತಿದೆ. ಭಾನುವಾರ ಮಧ್ಯರಾತ್ರಿಯ ವೇಳೆಗೆ ಸ್ಪೀಕರ್ ವಿಪ್ ಅಂಗೀಕಾರ ಮಾಡಿದ್ದಾರೆ ”ಎಂದು ಸಿಂಘ್ವಿ ತುರ್ತು ವಿಚಾರಣೆಗೆ ವಿಷಯವನ್ನು ಪ್ರಸ್ತಾಪಿಸುವಾಗ ಹೇಳಿದರು. ಬಾಕಿ ಉಳಿದಿರುವ ಅರ್ಜಿಗಳ ಜೊತೆಗೆ ಜುಲೈ 11ಕ್ಕೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.
ಇದನ್ನೂ ಓದಿ: ಉದ್ದವ್ ಆಟ ಶುರು: ಶಿವಸೇನಾ ನಾಯಕನ ಸ್ಥಾನದಿಂದ ಶಿಂಧೆ ವಜಾಗೊಳಿಸಿದ ಠಾಕ್ರೆ!
ಭಾನುವಾರ, ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಭರತ್ ಗೊಗವಾಲೆ ಅವರನ್ನು ಶಿವಸೇನೆಯ ಹೊಸ ಮುಖ್ಯ ಸಚೇತಕರಾಗಿ ಮತ್ತು ಏಕನಾಥ್ ಶಿಂದೆ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಸದನದಲ್ಲಿ ನೇಮಿಸಿತ್ತು. ಉದ್ಧವ್ ಠಾಕ್ರೆ ಪಾಳೆಯವು ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಿತ್ತು. ಅಜಯ್ ಚೌಧರಿ ಅವರನ್ನು ನೇಮಕ ಮಾಡಿತ್ತು. ಸುನೀಲ್ ಪ್ರಭು ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿತ್ತು.