ಮುಂಬೈ: ಮಹಾರಾಷ್ಟ್ರದ ಶಿವಸೇನೆ ಪಕ್ಷದ ಚಿಹ್ನೆ ಬಿಲ್ಲು, ಬಾಣದ ಕದನ ಜೋರಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಶಿವಸೇನೆಯ ಮೂಲ ಚಿಹ್ನೆ ದಕ್ಕಿರುವ ವಿರುದ್ಧ ಇನ್ನೊಂದು ಬಣದ ನಾಯಕ, ಮಾಜಿ ಸಿಎಂ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ. "ಕಳ್ಳರು ನಮ್ಮ ಚಿಹ್ನೆಯನ್ನು ಕದ್ದಿದ್ದಾರೆ. ಅವರಿಗೆ ಪಾಠ ಕಲಿಸಬೇಕು" ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. ಇತ್ತ ಕೇಂದ್ರ ಸಚಿವ ಅಮಿತ್ ಶಾ, "ದೂದ್ ಕಾ ದೂಧ್, ಪಾನಿ ಕಾ ಪಾನಿ(ಸತ್ಯ ಹೊರಬಂದಿದೆ) ಹೋಗಯಾ" ಎಂದು ವ್ಯಂಗ್ಯವಾಡಿದ್ದಾರೆ.
ಮುಂಬೈನ ಬಾಂದ್ರಾದಲ್ಲಿರುವ ನಿವಾಸದ ಮುಂದೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, "ಪಕ್ಷದ ಬಿಲ್ಲನ್ನು ಕದ್ದ ಕಳ್ಳನಿಗೆ ತಕ್ಕ ಪಾಠ ಕಲಿಸುಬೇಕು. ಈಗಿನಿಂದಲೇ ಚುನಾವಣೆಗೆ ತಯಾರಿ ನಡೆಸಿ. ಕೆಲವರು ಜೇನುಗೂಡಿಗೆ ಕಲ್ಲು ಹೊಡೆದಿದ್ದಾರೆ. ಅವರಿಗೆ ಆ ಹುಳುವಿನ ಕಡಿತದ ಅನುಭವವಿಲ್ಲ. ಈ ಬಾರಿ ಅದರ ಅನುಭವ ಸಿಗಬೇಕು" ಎಂದು ಏಕನಾಥ್ ಶಿಂಧೆ ಬಣದ ವಿರುದ್ಧ ವಾಗ್ಬಾಣ ಪ್ರಯೋಗಿಸಿದ್ದಾರೆ.
"ಶಿಂಧೆ ಅವರು ಕದ್ದ ಬಿಲ್ಲು ಮತ್ತು ಬಾಣವನ್ನು ಹೊರಲು ಅಸಾಧ್ಯ. ಶಿವಧನುಸ್ಸನ್ನು ಎತ್ತಲಾಗದೇ ಕುಸಿದು ಬಿದ್ದ ರಾವಣನಂತೆ, ಶಿಂಧೆ ಕೂಡ ಸೋಲು ಅನುಭವಿಸುತ್ತಾನೆ. ಅದು ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಮತ್ತು 2024 ರಲ್ಲಿ ನಡೆಯುವ ಅಸೆಂಬ್ಲಿ ಚುನಾವಣೆಯಲ್ಲಿ ಗೊತ್ತಾಗಲಿದೆ" ಎಂದು ಸವಾಲು ಹಾಕಿದರು.
"ಪಕ್ಷದ ಚಿಹ್ನೆ ಕೈತಪ್ಪಿದ ಬಗ್ಗೆ ನಾನು ಯಾವುದೇ ನೋವಿಲ್ಲ. ಆದರೆ, ನಿಮಗೆ ಕೊಡಲು ನನ್ನ ಬಳಿ ಏನೂ ಇಲ್ಲ. ಇದು ನನ್ನ ನೋವಿಗೆ ಕಾರಣವಾಗಿದೆ. ಬಾಳಾ ಸಾಹೇಬ ಠಾಕ್ರೆ ಅವರ ಆಶಯದಂತೆ ಪಕ್ಷವನ್ನು ಮುನ್ನಡೆಸೋಣ. ಕಳ್ಳರಿಗೆ ಮುಂದಿನ ಚುನಾವಣೆಗಳಲ್ಲಿ ತಕ್ಕಪಾಠ ಕಲಿಸಬೇಕು" ಎಂದು ಹೇಳಿದರು.
ಚುನಾವಣಾ ಆಯೋಗ ಪ್ರಧಾನಿ ಗುಲಾಮ: ಪಕ್ಷದ ಚಿಹ್ನೆಯನ್ನು ಶಿಂಧೆ ಬಣಕ್ಕೆ ಸಿಕ್ಕಿದ್ದರ ವಿರುದ್ಧ ಸಿಡಿಮಿಡಿಗೊಂಡಿರುವ ಉದ್ಧವ್ ಠಾಕ್ರೆ, "ಚುನಾವಣಾ ಆಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗುಲಾಮ" ಎಂದು ಜರಿದಿದ್ದಾರೆ. ಪ್ರಧಾನಿಯ ಗುಲಾಮರು ಈ ಕೆಲಸವನ್ನು ಮಾಡಿದ್ದಾರೆ. ನಿವೃತ್ತಿಯ ಬಳಿಕ ಈಗನ ಚುನಾವಣಾ ಆಯುಕ್ತರು ರಾಜ್ಯವೊಂದರ ಗವರ್ನರ್ ಆಗಬಹುದು. ಶಿವಸೇನೆ ಯಾರಿಗೆ ಸೇರಿದ್ದು ಎಂಬುದನ್ನು ಜನರು ನಿರ್ಧರಿಸುತ್ತಾರೆ'' ಎಂದರು.
ಸತ್ಯಕ್ಕೆ ಸಂದ ಜಯ- ಅಮಿತ್ ಶಾ: ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಸತ್ಯ ಹೊರಬಂದಿದೆ. ಹಾಲು ಹಾಲಾಗಿದೆ, ನೀರು ನೀರಾಗಿದೆ. ನಿಜವಾದ ಶಿವಸೇನೆಗೆ ಪಕ್ಷದ ಚಿಹ್ನೆ ದೊರಕಿದೆ. ಅಧಿಕಾರಕ್ಕಾಗಿ ಸೈದ್ಧಾಂತಿಕ ವೈರಿಗಳ ಪಾದ ನೆಕ್ಕಿದ್ದರು. ಈಗ ಸತ್ಯ ದರ್ಶನವಾಗಿದೆ" ಎಂದು ಹೇಳಿಕೆ ನೀಡಿದ್ದಾರೆ.
ಶನಿವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶಾ, "2019 ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಬಗ್ಗೆ ಯಾವುದೇ ಒಪ್ಪಂದವಾಗಿರಲಿಲ್ಲ. ಕೆಲವರು ಅಧಿಕಾರಕ್ಕಾಗಿ ವಿರೋಧಿ ಸಿದ್ಧಾಂತಗಳ ಪಕ್ಷಗಳೊಂದಿಗೆ ಕೈ ಜೋಡಿಸಿದರು. ಸತ್ಯಕ್ಕೆ ಜಯವಿದೆ ಎಂಬುದು ಮತ್ತೆ ನಿರೂಪಿತವಾಗಿದೆ" ಎಂದು ಹೇಳಿದರು.
"ಸುಳ್ಳು ಹೇಳಿಕೆಗಳನ್ನೇ ನೀಡುತ್ತಾ ತಿರುಗಾಡುತ್ತಿದ್ದ ಜನರಿಗೆ ಇಂದು ಸತ್ಯದ ಮನವರಿಕೆಯಾಗಿದೆ. ಕಳೆದ ಚುನಾವಣೆಯಲ್ಲಿ ಯಾವುದೇ "ಸಿಎಂ ಮೈತ್ರಿ" ಆಗಿರಲಿಲ್ಲ. ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದೆವು. ಬಳಿಕ ಅಧಿಕಾರಕ್ಕಾಗಿ ವಿರುದ್ಧ ಸಿದ್ಧಾಂತದ ಪಕ್ಷಗಳ ಜೊತೆ ಸೇರಿದರು" ಎಂದು ಟೀಕಿಸಿದರು.
ಇದನ್ನೂ ಓದಿ: ಏಕನಾಥ್ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ: ಉದ್ಧವ್ ಕೈ ಜಾರಿದ ಬಿಲ್ಲು-ಬಾಣ