ಸರಣ್/ಗಡ್ಖಾ: ಗಡ್ಖಾ ಪೊಲೀಸ್ ಠಾಣೆ ಪ್ರದೇಶದ ಮೋತಿರಾಜ್ಪುರ ಎಂಬಲ್ಲಿ ನಡೆದ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಒಂದೇ ಕುಟುಂಬದ ಇಬ್ಬರು ಸೇರಿ ಮೂವರು ಸಾವನ್ನಪ್ಪಿದ್ದರೆ, ಮತ್ತಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿಗಳ ಪ್ರಕಾರ ನಿನ್ನೆ ಸಂಜೆ ಯಾವುದೋ ವಿಷಯದ ಕುರಿತು 2 ಗುಂಪುಗಳ ನಡುವೆ ವಿವಾದ ಉಂಟಾಗಿದೆ. ವಿವಾದ ವಿಕೋಪಕ್ಕೇರಿ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದೆ. ಈ ವೇಳೆ ಬಂದೂಕು ಸದ್ದು ಮಾಡಿದ ಪರಿಣಾಮ ಒಂದೇ ಕುಟುಂಬದ ಇಬ್ಬರು ಬಲಿಯಾಗಿದ್ದಾರೆ. 60 ವರ್ಷದ ನಾಗೇಂದ್ರ ಸಿಂಗ್ ಮತ್ತು ಇವರ ಅಳಿಯ ಸಂಜಯ್ ಸಿಂಹ (25) ಗುಂಡೇಟು ತಗುಲಿ ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ. ಇದರಿಂದ ಕೋಪಗೊಂಡ ಊರಿನ ಜನ ಗುಂಡು ಹಾರಿಸಿದ ಆರೋಪಿಯನ್ನು ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಏನು ಕಾರಣ ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.