ಜಮ್ಮು: ಗುಜರಾತ್ ಗಲಭೆ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸತ್ಯ ಯಾವತ್ತಿದ್ದರೂ ಹೊರಬರುತ್ತದೆ ಎಂದು ಹೇಳಿದ್ದಾರೆ. ಜಮ್ಮುವಿನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸತ್ಯ ಯಾವತ್ತಿದ್ದರೂ ಹೊರಬರುತ್ತದೆ. ಪತ್ರಿಕಾ ಸ್ವಾತಂತ್ರ್ಯ ನಿಷೇಧಿಸುವುದು ಮತ್ತು ಜನರ ವಿರುದ್ಧ ಇಡಿ ಮತ್ತು ಸಿಬಿಐನಂತಹ ಸಂಸ್ಥೆಗಳನ್ನು ಬಳಸುವುದರಿಂದ ಸತ್ಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಬಿಬಿಸಿಯ ಸಾಕ್ಷ್ಯಚಿತ್ರವಾದ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಇದರ ಮೊದಲ ಸಂಚಿಕೆಯನ್ನು ಪ್ರಕಟಿಸಿದ ಹಲವಾರು ಯೂಟ್ಯೂಬ್ ವಿಡಿಯೋಗಳನ್ನು ನಿರ್ಬಂಧಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿರ್ದೇಶನ ನೀಡಿದೆ. ಬಲ್ಲ ಮೂಲಗಳ ಪ್ರಕಾರ, ಸಂಬಂಧಪಟ್ಟ ಯೂಟ್ಯೂಬ್ ವಿಡಿಯೋಗಳ ಲಿಂಕ್‌ಗಳನ್ನು ಹೊಂದಿರುವ 50 ಕ್ಕೂ ಹೆಚ್ಚು ಟ್ವೀಟ್‌ಗಳನ್ನು ನಿರ್ಬಂಧಿಸಲು ಟ್ವಿಟರ್‌ಗೆ ಆದೇಶ ನೀಡಲಾಗಿದೆ. ಐಟಿ ನಿಯಮಗಳು, 2021 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಶುಕ್ರವಾರ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಯೂಟ್ಯೂಬ್ ಮತ್ತು ಟ್ವಿಟರ್‌ಗೆ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ.
ನಿವೃತ್ತ ನ್ಯಾಯಾಧೀಶರು, ನಿವೃತ್ತ ಅಧಿಕಾರಿಗಳು ಮತ್ತು ನಿವೃತ್ತ ಸಶಸ್ತ್ರ ಪಡೆಗಳ ಯೋಧರು ತಾವು ಸಹಿ ಮಾಡಿರುವ ಹೇಳಿಕೆಯೊಂದನ್ನು ಶನಿವಾರ ಬಿಡುಗಡೆ ಮಾಡಿದ್ದು, ಬಿಬಿಸಿ ಸಾಕ್ಷ್ಯ ಚಿತ್ರವನ್ನು ಖಂಡಿಸಿದ್ದಾರೆ. ಬಿಬಿಸಿಯ ಸಾಕ್ಷ್ಯಚಿತ್ರವು ಬ್ರಿಟಿಷ್ ಸಾಮ್ರಾಜ್ಯಶಾಹಿ ಪುನರುತ್ಥಾನದ ಭ್ರಮೆ ಎಂದು ಅವರು ಜರಿದಿದ್ದಾರೆ. ಬ್ರಿಟನ್ನ ಸಾರ್ವಜನಿಕ ಮಾಧ್ಯಮವಾದ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ನಿರ್ಮಿಸಿದ ಸಾಕ್ಷ್ಯಚಿತ್ರವು ವಸ್ತುನಿಷ್ಠತೆ ಇಲ್ಲದ ಮತ್ತು ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುವ ಪ್ರಚಾರದ ತುಣುಕು ಎಂದು ಭಾರತದ ವಿದೇಶಾಂಗ ಸಚಿವಾಲಯ ಖಂಡಿಸಿದೆ.
ಇದು ಭಾರತದಲ್ಲಿ ಲಭ್ಯವಾಗದಿದ್ದರೂ, ಕೆಲವು ಯೂಟ್ಯೂಬ್ ಚಾನಲ್‌ಗಳು ಭಾರತ ವಿರೋಧಿ ಕಾರ್ಯಸೂಚಿಯನ್ನು ಪ್ರಚಾರ ಮಾಡಲು ಅದನ್ನು ಅಪ್‌ಲೋಡ್ ಮಾಡಿದಂತೆ ಕಂಡುಬರುತ್ತಿದೆ. ಯೂಟ್ಯೂಬ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮತ್ತೆ ಅಪ್‌ಲೋಡ್ ಮಾಡಿದರೆ ಅದನ್ನು ನಿರ್ಬಂಧಿಸಲು ಯೂಟ್ಯೂಬ್‌ಗೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ. ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಡಿಯೋಗೆ ಲಿಂಕ್ ಹೊಂದಿರುವ ಟ್ವೀಟ್‌ಗಳನ್ನು ಗುರುತಿಸಲು ಮತ್ತು ನಿರ್ಬಂಧಿಸಲು ಟ್ವಿಟರ್‌ಗೆ ನಿರ್ದೇಶಿಸಲಾಗಿದೆ.
ಮಳೆಯಲ್ಲಿ ಸಾಗಿದ ಭಾರತ್ ಜೋಡೊ ಯಾತ್ರೆ: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಮಂಗಳವಾರ ಜಮ್ಮುವಿನ ನಗ್ರೋಟಾದಿಂದ ಪ್ರಾರಂಭವಾಯಿತು. ಇಲ್ಲಿಂದ ಸುಮಾರು ಐದು ಕಿಲೋಮೀಟರ್ ನಡೆಯುತ್ತ ಮುಂದೆ ಸಾಗಿತು. ಇದಾದ ಬಳಿಕ ರಾಹುಲ್ ಗಾಂಧಿ ಅವರು ಜಜ್ಜರ್ ಕೋಟ್ಲಿಯಲ್ಲಿ ರಾಹುಲ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಸಣ್ಣ ಮಳೆ ಹನಿಗಳ ಮಧ್ಯೆ ಯಾತ್ರೆ ಮಧ್ಯಾಹ್ನ ಉಧಂಪುರ ತಲುಪಿತು. ಜಮ್ಮುವಿನ ಜಜ್ಜರ್ ಕೋಟ್ಲಿಯಲ್ಲಿ ರಾಹುಲ್ ಗಾಂಧಿ ಮಾತನಾಡಿದರು.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಸೃಷ್ಟಿಸಿರುವ ದ್ವೇಷದ ವಾತಾವರಣದ ವಿರುದ್ಧ ಎದ್ದು ನಿಲ್ಲುವುದು ಈ ಯಾತ್ರೆಯ ಗುರಿಯಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪೂರ್ಣ ರಾಜ್ಯ ಸ್ಥಾನಮಾನದ ಸಮಸ್ಯೆ ಇದೆ. ರಾಜ್ಯದಲ್ಲಿ ಆದಷ್ಟು ಬೇಗ ವಿಧಾನಸಭೆ ಮರುಸ್ಥಾಪಿಸಬೇಕು. ಈ ಪಾದಯಾತ್ರೆಯಲ್ಲಿ ರಾಜ್ಯದ ಜನತೆಯ ನೋವು-ನಲಿವುಗಳನ್ನು ಅರಿಯುವ ಅವಕಾಶ ಸಿಗುತ್ತಿದೆ ಎಂದು ಹೇಳಿದರು.