ಬಹದ್ದೂರ್‌ಗಢ (ಹರಿಯಾಣ): ಹರಿಯಾಣದ ಕುಂಡ್ಲಿ ಮನೇಸರ್ ಪಲ್ವಾಲ್ (ಕೆಎಂಪಿ) ಹೆದ್ದಾರಿಯಲ್ಲಿ ಗುರುವಾರ ಬೆಳಗ್ಗೆ ಭಾರಿ ದುರಂತ ನಡೆದಿದೆ. ರಸ್ತೆ ಬದಿಯಲ್ಲಿ ಮಲಗಿದ್ದ 14 ಜನ ಅಮಾಯಕ ಕಾರ್ಮಿಕರ ಮೇಲೆ ವೇಗವಾಗಿ ಬಂದ ಲಾರಿಯೊಂದು ಹರಿದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ 11 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಈ ಎಲ್ಲ ಕಾರ್ಮಿಕರು ಉತ್ತರ ಪ್ರದೇಶದ ಮೂಲದವರಾಗಿದ್ದು, ಇದೇ ಹೆದ್ದಾರಿಯಲ್ಲಿ ಕಳೆದ ಎರಡು ತಿಂಗಳಿಂದ ಸೇತುವೆಗಳ ದುರಸ್ತಿ ಕೆಲಸ ಮಾಡುತ್ತಿದ್ದರು. ಬುಧವಾರ ತಡರಾತ್ರಿಯವರೆಗೂ ಕೆಲಸ ಮುಗಿಸಿದ್ದ ಕಾರ್ಮಿಕರು, ರಾತ್ರಿ ರಸ್ತೆ ಬದಿ ಮಲಗಿದ್ದರು. ಮಲಗುವ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆಯ ಒಂದು ಬದಿಯಲ್ಲಿ ಬ್ಯಾರಿಕೇಡ್ ಇರಿಸಿಕೊಂಡಿದ್ದರು. ಅಲ್ಲದೇ, ರಿಫ್ಲೆಕ್ಟರ್ ಬೋರ್ಡ್ಗಳನ್ನೂ ಅಳವಡಿಸಿಕೊಂಡಿದ್ದಾರೆ.
ಆದರೂ, ವೇಗವಾಗಿ ಬಂದ ಲಾರಿ ಬ್ಯಾರಿಕೇಡ್ಗಳನ್ನು ಗುದ್ದಿಕೊಂಡು ಹೋಗಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದಿದೆ. ಅಲ್ಲದೇ, ಹೆದ್ದಾರಿಯ ಮೇಲೆಯೇ ಲಾರಿ ಪಲ್ಟಿಯಾಗಿದೆ. ಈ ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳು 10 ಜನ ಕಾರ್ಮಿಕರ ಪೈಕಿ ಕೆಲವರ ಚಿಂತಾಜನಕವಾಗಿದ್ದು, ಚಿಕಿತ್ಸೆಗಾಗಿ ರೋಹ್ಟಕ್‌ಗೆ ಸಾಗಿಸಲಾಗಿದೆ. ಮತ್ತೊಬ್ಬನನ್ನು ಬಹದ್ದೂರ್‌ಗಢದ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಈ ದುರಂತಕ್ಕೆ ಕಾರಣವಾದ ಲಾರಿ ಚಾಲಕನನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಡಿಕೇರಿ: ಪ್ರತ್ಯೇಕ ಅಪಘಾತದಲ್ಲಿ ಮೂವರು ಸಾವು