ಧಮ್ತಾರಿ(ಛತ್ತೀಸ್ಗಢ): 500 ರೂಪಾಯಿ ಕಳ್ಳತನ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದರಿಂದ ಕುಟುಂಬದ ಎಲ್ಲ ಸದಸ್ಯರು ವಿಷ ಸೇವಿಸಿ, ಸಾವಿಗೆ ಯತ್ನಿಸಿರುವ ಘಟನೆ ಛತ್ತೀಸ್ಗಢದ ಧಮ್ತಾರಿ ಎಂಬಲ್ಲಿ ನಡೆದಿದೆ.
ದಿಲೀಪ್ ಯಾದವ್ ಕುಟುಂಬದ ಮೇಲೆ ನೆರೆ ಮನೆಯಲ್ಲಿ ವಾಸವಾಗಿದ್ದ ಕುಟುಂಬವೊಂದು ಹಣ ಕಳ್ಳತನದ ಆರೋಪ ಮಾಡಿದೆ. ತಾವು ಹಣ ಕದ್ದಿಲ್ಲ ಎಂದು ದಿಲೀಪ್ ಯಾದವ್ ಹೇಳಿದ್ದಾರೆ. ಆದರೆ ನೆರೆ ಮನೆಮಂದಿ ಇದನ್ನು ಊರು ತುಂಬೆಲ್ಲ ಹೇಳಲು ಶುರು ಮಾಡಿದ್ದರಂತೆ. ಇದರಿಂದ ನೊಂದಿರುವ ಕುಟುಂಬ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆ ನಡೆದ ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹೀಗಾಗಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ರಾಜ್ ಕುಂದ್ರಾಗೆ ಜುಲೈ 23ರವರೆಗೆ ನ್ಯಾಯಾಂಗ ಬಂಧನ; ಆರೋಪ ಸಾಬೀತಾದರೆ 7 ವರ್ಷ ಜೈಲೂಟ
ಪೊಲೀಸರು ಒದಗಿಸಿರುವ ಮಾಹಿತಿ ಪ್ರಕಾರ, ನೆರೆಮನೆಯವರ ವರ್ತನೆಯಿಂದ ಬೇಸರಗೊಂಡು ಇವರು ಈ ನಿರ್ಧಾರ ಕೈಗೊಂಡಿದ್ದಾರೆ. ದಿಲೀಪ್ ಯಾದವ್ ಪರಿವಾರದಲ್ಲಿ ಆತನ ಪತ್ನಿ, ಇಬ್ಬರು ಹೆಣ್ಣು ಹಾಗೂ ಮತ್ತಿಬ್ಬರು ಗಂಡು ಮಕ್ಕಳಿದ್ದಾರೆ. ಕಳ್ಳತನ ಮಾಡಿಲ್ಲ ಎಂದು ಎಷ್ಟೇ ಹೇಳಿದರೂ ಕೂಡ ಗ್ರಾಮದಲ್ಲಿ ಇವರ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರಂತೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.