ಔರಂಗಾಬಾದ್: ಮೂಲ ಸೌಕರ್ಯದಿಂದ ವಂಚಿತರಾದ ಗ್ರಾಮಸ್ಥರು ರಸ್ತೆಗಾಗಿ ವಿನೂತನ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದಿರುವ ಘಟನೆ ದುಸಾದ್ ಬಿಘಾ ಗ್ರಾಮದಲ್ಲಿ ಕಂಡು ಬಂತು.
ದುಸಾದ್ ಬಿಘಾ ಗ್ರಾಮಸ್ಥರು ಕಚ್ಚಾ ರಸ್ತೆಯಿಂದ ಬೇಸತ್ತು ವಿನೂತನ ಪ್ರತಿಭಟನೆ ನಡೆಸಿದರು. ಹಳ್ಳಿಯ ಜನರು ಮಂಚದ ಮೇಲೆ ರೋಗಿಯೊಬ್ಬರನ್ನು ಮಲಗಿಸಿದರು. ಬಳಿಕ ಮಂಚವನ್ನು ನಾಲ್ವರು ಎತ್ತಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುವ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಿಎಂ ನಿತೀಶ್ ಕುಮಾರ್ ಅವರೇ ಇಲ್ಲಿ ನೋಡಿ. ರಸ್ತೆ ಹೇಗಿದೆ. ರೋಗಿಗಳನ್ನು ಆಸ್ಪತ್ರೆಗೆ ಇದೇ ರೀತಿ ಕರೆದುಕೊಂಡು ಹೋಗಬೇಕು. ಇಲ್ಲಿ ಯಾವ ಆಂಬ್ಯುಲೆನ್ಸ್ ಸಹ ಬರುವುದಿಲ್ಲ. ನಮ್ಮ ಪಾಡು ಇದೇ ಆಗಿದೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರ ವಿನೂತನ ಪ್ರತಿಭಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಸದ್ದು ಮಾಡಿದೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸ್ಪಂದಿಸಿದೆ.
ಈ ಪ್ರದೇಶದಲ್ಲಿ ಸುಮಾರು 50 ಮನೆಗಳಿವೆ. ಚಲಿಸಲು ರಸ್ತೆ ಇಲ್ಲದೇ ಪರದಾಡುತ್ತಿರುವುದರ ಬಗ್ಗೆ ಗಮನಕ್ಕೆ ಬಂದಿದೆ. ರಸ್ತೆಯ ಡಿಪಿಆರ್ ಶೀಘ್ರದಲ್ಲೇ ಸಿದ್ಧವಾಗಲಿದೆ. ಅದರ ನಂತರ ರಸ್ತೆ ನಿರ್ಮಾಣ ಪ್ರಾರಂಭವಾಗುತ್ತದೆ ಎಂದು ಜಿಲ್ಲಾಧಿಕಾರಿ ಸೌರಭ್ ಜೋರ್ವಾಲ್ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಗ್ರಾಮಸ್ಥರಿಗೆ ಅನೇಕ ಭರವಸೆಗಳು ಸರ್ಕಾರ ನೀಡಿದೆ. ರಸ್ತೆಯ ಡಿಪಿಆರ್ ಸಿದ್ಧವಾದಗಲೆಲ್ಲ ರಸ್ತೆ ನಿರ್ಮಾಣ ಆಗುತ್ತೆ ಎಂಬ ಕನಸು ಕಾಣುತ್ತೇವೆ. ಆದ್ರೂ ಸಹ ರಸ್ತೆ ಮಂಜೂರು ಆಗುವುದಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.