ದಂತೇವಾಡ (ಛತ್ತೀಸ್ಗಡ): ಇಂದ್ರಾವತಿ ನದಿಗೆ ಅಡ್ಡಲಾಗಿರುವ ಮಾವೋವಾದಿ ಪೀಡಿತ ಪ್ರದೇಶದ ಪಹುನ್‌ಹಾರ್ ಗ್ರಾಮದ ನಿವಾಸಿಗಳು 70 ವರ್ಷಗಳಲ್ಲಿ ಮೊದಲ ಬಾರಿಗೆ ಗಣರಾಜ್ಯೋತ್ಸವದಂದು ಕಪ್ಪು ಧ್ವಜದ ಬದಲಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು.
ಇಂದ್ರಾವತಿ ನದಿಗೆ ಅಡ್ಡಲಾಗಿರುವ ಇಡೀ ಪ್ರದೇಶವು ಮಾವೋವಾದದ ತಾಣವಾಗಿದೆ. ದಂತೇವಾಡದ ಈ ಭಾಗದಲ್ಲಿ ವಾಸಿಸುವ ಜನರು ಸರ್ಕಾರದ ಯೋಜನೆಗಳ ಫಲದಿಂದ ವಂಚಿತರಾಗಿದ್ದಾರೆ. "ಈ ಗ್ರಾಮದಲ್ಲಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂದು ಮಾವೋವಾದಿಗಳು ಯಾವಾಗಲೂ ಗ್ರಾಮಸ್ಥರ ಸಮ್ಮುಖದಲ್ಲಿ ಕಪ್ಪು ಧ್ವಜಗಳನ್ನು ಹಾರಿಸುತ್ತಾರೆ. ಆದರೆ, ಈ ಬಾರಿ ಈ ಘಟನೆ ನಡೆಯದೆ ತ್ರಿವರ್ಣ ಧ್ವಜ ಹಾರಿಸಿದ್ದಾರೆ" ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಭಿಷೇಕ್ ಪಲ್ಲವ್ ಹೇಳಿದ್ದಾರೆ.
ಈ ಹಿಂದೆ ಇಲ್ಲಿಗೆ ಸವಲತ್ತುಗಳನ್ನು ನೀಡಬೇಕು ಎಂದು ಮುಂದಾದ ಸರ್ಪಂಚ್ ಪೊಸೆರಾಮ್ ಅವರು ಸಾವನ್ನಪ್ಪಿದರು. ಆದರೆ, ಅವರ ಪುತ್ರ ಕೇಶವ್ ಕಶ್ಯಪ್ ಅವರು ರಾಷ್ಟ್ರೀಯ ಧ್ವಜವನ್ನು ಹಾರಿಸಲು ನಿರ್ಧರಿಸಿದರು. ಗ್ರಾಮದಲ್ಲಿ ದೇಶಭಕ್ತಿ ಗೀತೆ ಮೊಳಗಿತು. ಇದೇ ವೇಳೆ, ಮಕ್ಕಳಿಗೆ ಅಧ್ಯಯನ ಸಾಮಗ್ರಿಗಳನ್ನು ಮತ್ತು ಅಗತ್ಯ ವಸ್ತುಗಳನ್ನು ಗ್ರಾಮಸ್ಥರಿಗೆ ಎಸ್‌ಪಿ ವಿತರಿಸಿದರು. "ಇದು ದಂತೇವಾಡದ ಬದಲಾಗುತ್ತಿರುವ ಮುಖ. ನಗರ, ಹೆಚ್ಚು ಅಭಿವೃದ್ಧಿ ಹೊಂದಿದ ಪ್ರದೇಶಗಳಿಗೆ ಈ ಗ್ರಾಮ ಸಂಪರ್ಕ ಕಲ್ಪಿಸುವಂತಹ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಈ ಬದಲಾವಣೆಗಳ ಬಗ್ಗೆ ಜನರು ಖುಷಿಪಟ್ಟಿದ್ದಾರೆ" ಎಂದು ಪಲ್ಲವ್ ಹೇಳಿದರು.