ನವದೆಹಲಿ: ಒಡಿಯಾ ಸ್ವಾತಂತ್ರ್ಯ ಹೋರಾಟಗಾರ ಬಕ್ಸಿ ಜಗಬಂಧು ಜೀವನಾಧಾರಿತ ದೂರದರ್ಶನ ಸರಣಿ "ವಿದ್ರೋಹಿ" ವಿಶೇಷ ಪ್ರದರ್ಶನವನ್ನು ದೆಹಲಿಯ ಫಿಲ್ಮ್ ಡಿವಿಷನ್ ಆಡಿಟೋರಿಯಂನಲ್ಲಿ ನಡೆಸಲಾಯಿತು. ಈ ವಿಶೇಷ ಪ್ರದರ್ಶನಕ್ಕೆ ಕೇಂದ್ರ ಸಚಿವರಾದ ಅಮಿತ್ ಶಾ, ಧರ್ಮೇಂದ್ರ ಪ್ರಧಾನ್, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜಯ್ ಪಾಂಡಾ, ಸಂಸದ ಅಪರಾಜಿತಾ ಸಾರಂಗಿ ಮತ್ತು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರಂತಹ ಹಲವಾರು ಪ್ರಮುಖರು ಆಗಮಿಸಿದ್ದರು.
ಬಕ್ಸಿ ಜಗಬಂಧು 1817 ರ ಪೈಕಾ ದಂಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅವರು ಖೋರ್ಧಾ ಪಡೆಗಳ ಕಮಾಂಡರ್ ಆಗಿದ್ದರು. ಕರ್ನಲ್ ಹರ್ಕೋಟ್ ನೇತೃತ್ವದ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಯುದ್ಧದಲ್ಲಿ ಸೋಲನುಭವಿಸಿದ ಬಳಿಕ ಅವರು, ರಾಜ ಮುಕುಂದ ದೇವ್ II ನನ್ನು ಬಂಧಿಸಿದ್ದರು. ಈ ವೇಳೆ, ಚದುರಿದ ಹೋರಾಟಗಾರರು, ನಿರಾಶೆಗೊಂಡ ಪಡೆಗಳನ್ನು ಮತ್ತು ಯುವಕರನ್ನು ಬಕ್ಸಿ ಒಟ್ಟುಗೂಡಿಸಿದನು. ಅಲ್ಲದೇ ಜಗಬಂಧು ಬಾನಾಪುರ ಮತ್ತು ಘುಮ್ಸೂರ್‌ನ ಆದಿವಾಸಿಗಳನ್ನು ಮುನ್ನಡೆಸಿ, ದೈತ್ಯಾಕಾರದ ಬ್ರಿಟಿಷ್ ಪಡೆಗಳ ವಿರುದ್ಧ ಹೋರಾಡಲು ಖೋರ್ಧಾ ಕಡೆಗೆ ಸಾಗಿದನು.
ಬ್ರಿಟಿಷರು, ಬಕ್ಸಿ ಜಗಬಂಧು ಅವರ ಇಬ್ಬರು ಪತ್ನಿಯರು ಮತ್ತು ಅಪ್ರಾಪ್ತ ಮಗ ಮತ್ತು ಇತರ ಕುಟುಂಬ ಸದಸ್ಯರನ್ನು ಕಟಕ್‌ನ ಬಾರಾಬತಿ ಕೋಟೆಯಲ್ಲಿ 1819 ರಲ್ಲಿ ಬಂಧಿಸಿ, ಶರಣಾಗುವಂತೆ ಒತ್ತಾಯಿಸಿದ್ದರು. ಬಳಿಕ ಅವರನ್ನೆಲ್ಲಾ 1820 ರಲ್ಲಿ ಬಿಡುಗಡೆಗೊಳಿಸಲಾಯಿತು. ಬಕ್ಸಿ ಜಗಬಂಧು ಅವರನ್ನು 1825 ರಲ್ಲಿ ಬಂಧಿಸಿ, ಜೈಲಿನಲ್ಲಿಡಲಾಯಿತು. ಬಳಿಕ ನಾಲ್ಕು ವರ್ಷಗಳ ನಂತರ ಅಂದರೆ 1829 ರಲ್ಲಿ ಜೈಲಿನಲ್ಲಿಯೇ ಅವರು ನಿಧನರಾದರು.
ಇದನ್ನೂ ಓದಿ:ಪ್ರಧಾನಿಗೆ ನೇತಾಜಿ ಪ್ರತಿಮೆ ಉಡುಗೊರೆ ಕೊಟ್ಟ ಮೈಸೂರಿನ ಅರುಣ್: ಇಂಡಿಯಾ ಗೇಟ್ ಬಳಿ ಬೋಸ್ ವಿಗ್ರಹ ನಿರ್ಮಿಸುವ ಹೊಣೆ