ರೇವಾ(ಮಧ್ಯಪ್ರದೇಶ): ರಾಜ್ಯದ ರೇವಾ ಜಿಲ್ಲೆಯಲ್ಲಿ ಖಾಸಗಿ ತರಬೇತಿ ವಿಮಾನವೊಂದು ದೇವಸ್ಥಾನದ ಗುಮ್ಮಟಕ್ಕೆ ಡಿಕ್ಕಿ ಹೊಡೆದು ಪೈಲಟ್ ಸಾವನ್ನಪ್ಪಿರುವ ಘಟನೆ ನಡೆದಿದೆ. ರೇವಾ ನಗರದ ಚೋರ್ಹಟಾ ಏರ್‌ಸ್ಟ್ರಿಪ್‌ನಲ್ಲಿ ಮಧ್ಯರಾತ್ರಿ ಸುಮಾರಿಗೆ ಅಪಘಾತ ಸಂಭವಿಸಿತು. ಅಪಘಾತದಲ್ಲಿ ಟ್ರೈನಿ ಪೈಲೆಟ್ ಗಾಯಗೊಂಡರೆ ಮುಖ್ಯ ಪೈಲೆಟ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ವಿಮಾನವು ಚೋರಹ್ತಾ ಏರ್‌ಸ್ಟ್ರಿಪ್‌ನಿಂದ 3 ಕಿಮೀ ದೂರದಲ್ಲಿ ತರಬೇತಿ ಪಥಸಂಚಲನದಲ್ಲಿದ್ದಾಗ ಚೋರ್ಹಟಾ ಪೊಲೀಸ್ ಠಾಣಾ ವ್ಯಾಪ್ತಿಯ ಉಮ್ರಿ ಗ್ರಾಮದ ದೇವಸ್ಥಾನದ ಗುಮ್ಮಟ ಮತ್ತು ಮರಕ್ಕೆ ಬಡಿದಿದೆ. ಅಪಘಾತ ಸಂಭವಿಸಿದ ತಕ್ಷಣವೇ ಆಡಳಿತ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಪೊಲೀಸ್ ತಂಡವೂ ಆಗಮಿಸಿತ್ತು. ಕೂಡಲೇ ಗಾಯಾಳುಗಳನ್ನು ಹತ್ತಿರದ ರೇವಾದ ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ವೇಳೆ ಪೈಲೆಟ್ ಸಾವನ್ನಪ್ಪಿದ್ರೆ, ಟ್ರೈನಿ ಪೈಲೆಟ್ ಗಂಭೀರವಾಗಿ ಗಾಯಗೊಂಡರು. ಸದ್ಯ ಅವರು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರೇವಾದ ಎಸ್ಪಿ ನವನೀತ್ ಭಾಸಿನ್ ತಿಳಿಸಿದ್ದಾರೆ.
ಮೃತ ಪೈಲೆಟ್ ವಿಶಾಲ್ ಯಾದವ್ (30) ಎಂದು ಗುರುತಿಸಲಾಗಿದ್ದು, ಟ್ರೈನಿ ಪೈಲೆಟ್ ಅನ್ಶುಲ್ ಯಾದವ್ ಎಂದು ತಿಳಿದು ಬಂದಿದೆ. ಅಪಘಾತಕ್ಕೊಳಗಾದ ವಿಮಾನವು ಪಲ್ಟಾನ್ ಟ್ರೈನಿಂಗ್ ಕಂಪನಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ಹೇಳಿದರು.
ಪುಣೆಯಲ್ಲೂ ಸಂಭವಿಸಿತ್ತು ತರಬೇತಿ ವಿಮಾನ ಪತನ: ರೇವಾದಲ್ಲಿ ಸಂಭವಿಸಿದಂತೆ ಮಹಾರಾಷ್ಟ್ರದ ಪುಣೆಯಲ್ಲೂ ಇದೇ ರೀತಿಯ ಘಟನೆ ಕಳೆದ ವರ್ಷ ನಡೆದಿತ್ತು. ತರಬೇತಿ ವಿಮಾನ ಬಾರಾಮತಿ ವಿಮಾನ ನಿಲ್ದಾಣದಿಂದ ಬೆಳಗ್ಗೆ ಟೇಕಾಪ್ ಆಗಿ ಇಂದಾಪುರ ಕಡಬನವಾಡಿ ಬಳಿಯ ರೈತ ಬರ್ಹಟೆ ಜಮೀನನಲ್ಲಿ ಪತನಗೊಂಡಿತ್ತು. ಓರ್ವ ಮಹಿಳಾ ಪೈಲೆಟ್‌ಗೆ ಸಣ್ಣ ಪುಟ್ಟ ಗಾಯಗಳಾಗಿತ್ತು.
ಇದನ್ನೂ ಓದಿ: ಜಮೀನಿನಲ್ಲಿ ತರಬೇತಿ ವಿಮಾನ ಪತನ.. ಯುವ ಮಹಿಳಾ ಪೈಲಟ್ಗೆ ಗಾಯ
ತೆಲಂಗಾಣದಲ್ಲಿ ಟ್ರೈನಿ ವಿಮಾನ ಅಪಘಾತ: ನಲ್ಗೊಂಡ ಜಿಲ್ಲೆಯ ಪೆದ್ದವೂರ ಮಂಡಲದ ರಾಮಣ್ಣಗುಡೆಂ ತಾಂಡದಲ್ಲಿ ಕಳೆದ ವರ್ಷ ತರಬೇತಿ ವಿಮಾನ ಪತನಗೊಂಡು ಪೈಲೆಟ್ ಮತ್ತು ತರಬೇತಿ ಪೈಲೆಟ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸೆಪ್ಟೆಂಬರ್ 2020 ರಂದು ಉತ್ತರ ಪ್ರದೇಶದ ಅಜಂಘಡಲ್ಲಿ ಇದೇ ತರ ತರಬೇತಿ ವಿಮಾನ ಪತನವಾಗಿ ಪೈಲೆಟ್ ಸಾವನ್ನಪ್ಪಿದ್ದರು. ವಿಮಾನ ಹಠಾತ್ತನೆ ನಿಯಂತ್ರಣ ಕಲೆದುಕೊಂಡ ಕಾರಣ ಈ ಘಟನೆ ಸಂಭವಿಸಿತ್ತು.
ಇದನ್ನು ಓದಿ: ತಮಿಳುನಾಡು: ಪ್ರೇಯಸಿಗೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ ದುರುಳ ಪ್ರೇಮಿ