ಶ್ರೀಕಾಕುಳಂ(ಆಂಧ್ರ ಪ್ರದೇಶ): ಒಂದು ಅಪಘಾತದಿಂದ ಪಾರಾಗಲು ಮುನ್ನೆಚ್ಚರಿಕೆ ವಹಿಸಿದವರು, ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಸಾವಿನಿಂದ ಬಚಾವಾಗಲು ರೈಲಿನಿಂದ ಕೆಳಗಿಳಿದವರಲ್ಲಿ ಕೆಲವರು ದುರಂತ ಅಂತ್ಯ ಕಂಡಿರುವ ಘಟನೆ ಶ್ರೀಕಾಕುಳಂ ಜಿಲ್ಲೆಯಲ್ಲಿ ಸಂಭವಿಸಿದೆ. ಇಲ್ಲಿನ ಜಿ.ಸಿಗಡಂ ತಾಲೂಕಿನ ಬಟುವಾ ಗ್ರಾಮದ ಬಳಿ ರೈಲಿಗೆ ಸಿಲುಕಿ ಐವರು ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಏನಿದು ಘಟನೆ: ಕೊಯಮತ್ತೂರಿನಿಂದ ಸಿಲ್ಚರ್ಗೆ ಹೊರಟಿದ್ದ ಗುವಾಹಟಿ ಎಕ್ಸ್‌ಪ್ರೆಸ್ ಚೀಪುರುಪಲ್ಲಿ ದಾಟಿದ ನಂತರ ಬೋಗಿಯಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದರು. ಈ ಘಟನೆಯಿಂದ ಹೆದರಿದ ಕೆಲವರು ಕೆಳಗಿಳಿದು ಹಳಿಗಳ ಮೇಲೆ ನಿಂತಿದ್ದಾರೆ.
ಟ್ರೈನ್ಗೆ ಬಲಿ: ಅದೇ ಸಮಯದಲ್ಲಿ ಭುವನೇಶ್ವರದಿಂದ ವಿಶಾಖಪಟ್ಟಣಂ ಕಡೆಗೆ ವೇಗವಾಗಿ ಬಂದ ಕೋನಾರ್ಕ್ ಎಕ್ಸ್‌ಪ್ರೆಸ್ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಐವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬೊಬ್ಬರ ದೇಹ ಗುರುತು ಸಿಗದಂತೆ ಛಿದ್ರವಾಗಿ ಬಿದ್ದಿದ್ದವು.
ಜಿಲ್ಲಾಧಿಕಾರಿ ಭೇಟಿ: ಅಪಘಾತದಲ್ಲಿ ಸಾವನ್ನಪ್ಪಿರುವವರ ಪೈಕಿ ಇಬ್ಬರು ಅಸ್ಸೋಂ ಮೂಲದವರೆಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಶ್ರೀಕಾಕುಳಂಗೆ ರವಾನಿಸಲಾಗಿದೆ. ಶ್ರೀಕಾಕುಳಂ ಜಿಲ್ಲಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಸ್ಥಳದಲ್ಲೇ ಬೀಡು ಬಿಟ್ಟ ಪೊಲೀಸರು: ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡರು. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹಗಳನ್ನು ಸಂಗ್ರಹಿಸಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು. ಈ ಘಟನೆ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಸಿಎಂ ಜಗನ್ ಸಂತಾಪ: ರೈಲು ಅಪಘಾತದ ಬಗ್ಗೆ ಸಿಎಂ ಜಗನ್ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿ ಸಂತಾಪ ಸೂಚಿಸಿದರು.