ಅಮ್ರೋಹ(ಉತ್ತರ ಪ್ರದೇಶ): ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಸಾವಿನ ಮನೆ ಕದ ತಟ್ಟುವ ಸ್ಥಿತಿಯಲ್ಲಿರುವ ರೋಗಿಗಳನ್ನು ಬದುಕಿಸುವ ಕೆಲಸ ಮಾಡುತ್ತಾರೆ. ಎಷ್ಟೋ ಸಂದರ್ಭಗಳಲ್ಲಿ ಇಂತಹ ಘಟನೆಗಳು ಸಾಕ್ಷಿಯಾಗಿವೆ. ಆದ್ರೆ ಉತ್ತರ ಪ್ರದೇಶದಲ್ಲಿ ಇದಕ್ಕೆ ತದ್ವಿರುದ್ಧ ಎಂಬಂತ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು, ಅಮ್ರೋಹ ಜಿಲ್ಲೆಯ ಸೈಫಿ ನರ್ಸಿಂಗ್ ಹೋಮ್ ವೈದ್ಯರು ಮಹಿಳೆಯ ಹೆರಿಗೆ ಆಪರೇಷನ್ ಮಾಡುತ್ತಿದ್ದ ವೇಳೆ ಟವೆಲ್ ಬಿಟ್ಟಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.
ಹಿಂದಿನ ತಿಂಗಳು ಡಿಸೆಂಬರ್ 20 ರಂದು ಹೆರಿಗೆ ನೋವಿನಿಂದ ಬಳಲುತ್ತಿದ್ದ ನಜ್ರಾನಾ ಅಲಿ ಎಂಬ ಮಹಿಳೆ ಸೈಫಿ ನರ್ಸಿಂಗ್ ಹೋಮ್‌ಗೆ ದಾಖಲಾಗಿದ್ದಳು. ಈ ಮಹಿಳೆ ಹೆರಿಗೆ ಆಪರೇಷನ್ ಮಾಡುವ ವೇಳೆ ವೈದ್ಯರು ನಿರ್ಲಕ್ಷ್ಯದಿಂದ ಟವೆಲ್ ಅನ್ನು ಹೊಟ್ಟೆಯೊಳಗೆ ಬಿಟ್ಟಿದ್ದು, ಈ ವಿಷಯ ಬೆಳಕಿಗೆ ಬಂದ ನಂತರ ಜಿಲ್ಲಾ ಆರೋಗ್ಯ ಇಲಾಖೆಯೊಳಗೆ ಅಲ್ಲೋಲ ಕಲ್ಲೋಲ ಉಂಟಾಗಿದೆ.
ಈ ಘಟನೆ ಬಳಿಕ ಮುಖ್ಯ ವೈದ್ಯಾಧಿಕಾರಿ ಡಾ.ರಾಜೀವ್ ಸಿಂಘಾಲ್ ಅವರು, ಬುಧವಾರ ತನಿಖೆಗೆ ಆದೇಶಿಸಿದ್ದಾರೆ. ಸದ್ಯ ಆದರೆ, ಸಂತ್ರಸ್ತೆ ಈ ವಿಚಾರದಲ್ಲಿ ಇದು ವರೆಗೆ ಯಾವುದೇ ಲಿಖಿತ ದೂರು ನೀಡಿಲ್ಲ.
ಶೀತದ ಕಾರಣ ನೀಡಿ ಡಿಸ್ಚಾರ್ಜ್: ನೌಗವಾನ ಸಾದತ್ ಪೊಲೀಸ್ ಠಾಣಾ ವ್ಯಾಪ್ತಿಯ ಬಂಸ್ಖೇಡಿ ಗ್ರಾಮದ ನಿವಾಸಿ ಶಂಶೇರ್ ಅಲಿ ಅವರು ಪತ್ನಿ ಹೆರಿಗೆಯಿಂದ ಬಳಲುತ್ತಿದ್ದ ನಜ್ರಾನಾಳನ್ನು ಡಿಸೆಂಬರ್ 20 ರಂದು ಡಾ. ಮತ್ಲುಬ್ ಅವರ ಸೈಫಿ ನರ್ಸಿಂಗ್ ಹೋಮ್‌ಗೆ ಸೇರಿಸಿದ್ದರು.
ಆಪರೇಷನ್ ಕಾರ್ಯಾಚರಣೆ ವೇಳೆ ವೈದ್ಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಹಿಳೆಯ ಹೊಟ್ಟೆಯಲ್ಲಿ ಟವೆಲ್ ಬಿಟ್ಟಿದ್ದರು. ನಜ್ರಾನಾ ಅವರು ಹೊಟ್ಟೆ ನೋವಿನ ಬಗ್ಗೆ ಹಿರಿಯ ವೈದ್ಯ ಡಾ ಮತ್ಲುಬ್‌ಗೆ ದೂರು ನೀಡಿದ್ದರು. ವೈದ್ಯರು ಐದು ದಿನಗಳ ನಂತರ ಅಂದರೆ ಡಿಸೆಂಬರ್ 25 ರಂದು ಶೀತದ ಕಾರಣ ನೀಡಿ ಡಿಸ್ಚಾರ್ಜ್ ಮಾಡಿದ್ದರು.
ಕೆಲ ದಿನಗಳ ನಂತರ ಮತ್ತೊಮ್ಮೆ ಆಪರೇಷನ್: ಮನೆಗೆ ಬಂದರೂ ನಜ್ರಾನಾ ಆರೋಗ್ಯ ಸುಧಾರಿಸದೇ ಇದ್ದಾಗ ಆಕೆಯನ್ನು ಮತ್ತೆ ಅಮ್ರೋಹಾದಲ್ಲಿರುವ ಡಾ ಗರ್ಗ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ವೇಳೆ ವೈದ್ಯರು ಪರೀಕ್ಷಿಸಿದಾಗ ಹೊಟ್ಟೆಯಲ್ಲಿ ಆಪರೇಷನ್ ಮಾಡುವಾಗ ವೈದ್ಯರು ಟವೆಲ್ ಬಿಟ್ಟು ಹೋಗಿರುವುದು ಕಂಡುಬಂದಿದೆ ಎಂದು ಸಂತ್ರಸ್ತೆ ನಜ್ರಾನ ಅಲಿ ತಿಳಿಸಿದ್ದಾರೆ. ಅಮ್ರೋಹಾ ಡಾ ಗರ್ಗ್ ಆಸ್ಪತ್ರೆಯಲ್ಲಿ ಮತ್ತೊಮ್ಮೆ ನಜರಾನಾಗೆ ಅಪರೇಷನ್ ಮಾಡಿ ಹೊಟ್ಟೆಯಿಂದ ಟವೆಲ್ ಹೊರತೆಗೆದಾಗ ಸಂಬಂಧಿಕರು ಗಾಬರಿಗೊಂಡಿದ್ದರು.
ಈ ವಿಷಯ ಆರೋಗ್ಯ ಇಲಾಖಾ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಇದಾದ ನಂತರ ಸಿಎಂಒ ಡಾ.ರಾಜೀವ್ ಸಿಂಘಾಲ್ ಅವರು, ತರಾತುರಿಯಲ್ಲಿ ಪ್ರಕರಣದ ತನಿಖೆಯನ್ನು ನೋಡಲ್ ಅಧಿಕಾರಿ ಡಾ.ಶರದ್ ಅವರಿಗೆ ಹಸ್ತಾಂತರಿಸಿದರು. ವರದಿ ಬಂದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಶಂಶೇರ್ ಅಲಿ ಅವರು ಲಿಖಿತವಾಗಿ ಯಾವುದೇ ದೂರು ನೀಡಿಲ್ಲ ಎಂದು ಸಿಎಂಒ ತಿಳಿಸಿದ್ದಾರೆ. ಆದರೆ ಇನ್ನೂ ತನಿಖೆ ನಡೆಯಲಿದೆ.
ಇದನ್ನೂಓದಿ:ಡೆಹ್ರಾಡೂನ್ನಿಂದ ಮುಂಬೈಗೆ ರಿಷಭ್ ಏರ್ಲಿಫ್ಟ್: ಅಂಬಾನಿ ಆಸ್ಪತ್ರೆಗೆ ಪಂತ್ ದಾಖಲು