ನವದೆಹಲಿ: ಸುಳ್ಳು ಮತ್ತು ದುರುದ್ದೇಶ ಪೂರಿತ ಪ್ರಚಾರ ಮಾಡುತ್ತಿರುವ ಕೇಂದ್ರ ಸರ್ಕಾರದ 11 ಸಚಿವರ ಟ್ವೀಟ್‌ಗಳಿಗೆ ತುರ್ತಾಗಿ 'ತಿರುಚಿದ ಮಾಧ್ಯಮ' ಎಂಬ ಮುದ್ರೆ ಹಾಕುವ ಅಗತ್ಯ ಇದೆ ಎಂದು ಕಾಂಗ್ರೆಸ್ ಟ್ವಿಟರ್‌ಗೆ ಪತ್ರ ಬರೆದು ತಾಕೀತು ಮಾಡಿದೆ.
ಕಾಂಗ್ರೆಸ್ ತನ್ನ ಪತ್ರದಲ್ಲಿ ಮಾಜಿ ಸಂಸತ್ ಸದಸ್ಯ ರಾಜೀವ್ಗೌಡ ಮತ್ತು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಭಾಗದ ಅಧ್ಯಕ್ಷ ರೋಹನ್ ಗುಪ್ತಾ ಈ ಹಿಂದೆ ಟ್ವಿಟರ್‌ಗೆ ನೀಡಿದ ಸಂವಹನ ಉದ್ದೇಶಿಸಿ ಬಿಜೆಪಿ ನಾಯಕರು ರಚಿಸಿದ ನಕಲಿ 'ಟೂಲ್‌ಕಿಟ್' ದಾಖಲೆಯ ಬಗ್ಗೆ ಪ್ರಸ್ತಾಪಿಸಿದೆ.
ಪಕ್ಷ ಮತ್ತು ಅವರ ನಾಯಕರ ವಿರುದ್ಧ ಅಪಾಯಕಾರಿ, ಸುಳ್ಳು ಮತ್ತು ಕಲ್ಪಿತ ವಸ್ತುಗಳನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ಗಳ ಮೂಲಕ ಹಬ್ಬಿಸಿ ಪ್ರಯೋಜನ ಪಡೆಯುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ನಕಲಿ ದಾಖಲೆ ಮತ್ತು ಸುಳ್ಳು ಮಾಹಿತಿ ಹಬ್ಬಿಸುತ್ತಿರುವ ಆರೋಪದ ಮೇಲೆ ಕೇಂದ್ರ ಸಚಿವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರ ಹರಡಿದ್ದಕ್ಕಾಗಿ ಮೋದಿ ಸರ್ಕಾರದ ಕೇಂದ್ರ ಸಚಿವರ ಟ್ವೀಟ್‌ಗಳಿಗೆ 'ಮ್ಯಾನಿಪ್ಯುಲೇಟಿವ್ ಮೀಡಿಯಾ' ಟ್ಯಾಗ್‌ಗಳನ್ನು ಜೋಡಿಸುವ ಅವಶ್ಯಕತೆಯಿದೆ ಎಂದು ಕಾಂಗ್ರೆಸ್ ಪತ್ರದಲ್ಲಿ ಹೇಳಿದೆ.
ಶಾಂಡಿಲ್ಯ ಗಿರಿರಾಜ್ ಸಿಂಗ್, ಪಿಯೂಷ್ ಗೋಯಲ್, ಸ್ಮೃತಿ ಇರಾನಿ, ರವಿಶಂಕರ್ ಪ್ರಸಾದ್, ಪ್ರಹ್ಲಾದ್ ಜೋಶಿ, ಧರ್ಮೇಂದ್ರ ಪ್ರಧಾನ್, ರಮೇಶ್ ಪೋಖ್ರಿಯಾಲ್ ನಿಶಾಂಕ್, ತವಾರ್ಚಂದ್ ಗೆಹ್ಲೋಟ್, ಹರ್ಷವರ್ಧನ್, ಮುಖ್ತಾರ್ ಅಬ್ಬಾಸ್ ನಕ್ವಿ ಹಾಗೂ ಗಜೇಂದ್ರ ಸಿಂಗ್ ಶೇಕಾವತ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿದೆ.