ನವದೆಹಲಿ: ಟೂಲ್‌ಕಿಟ್ ಪ್ರಕರಣ ಆರೋಪಿ ದಿಶಾ ರವಿ ವಿರುದ್ಧ ಎಫ್‌ಐಆರ್‌ನ ತನಿಖೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿಲ್ಲ ಎಂದು ಪೊಲೀಸರಿಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ. ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಯಾವುದೇ ತನಿಖಾ ಮಾಹಿತಿಯನ್ನು ಮಾಧ್ಯಮಕ್ಕೆ ಸೋರಿಕೆಯಾಗದಂತೆ ಪೊಲೀಸರಿಗೆ ನಿರ್ಬಂಧಿಸುವಂತೆ ದಿಶಾ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ಪುರಸ್ಕರಿಸಿತ್ತು.
ಅರ್ಜಿಯು ಸಾರ್ವಜನಿಕ ಪ್ರಾಮುಖ್ಯತೆಯ ಪ್ರಮುಖ ಪ್ರಶ್ನೆ ಹುಟ್ಟುಹಾಕುತ್ತದೆ ಎಂದು ಪರಿಗಣಿಸಿ, ಸೆಪ್ಟೆಂಬರ್ 27 ರ ವಾದ ಆಲಿಸುವ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ನ್ಯಾಯಮೂರ್ತಿ ರೇಖಾ ಪಲ್ಲಿ ಹೇಳಿದ್ದಾರೆ. ದೆಹಲಿ ಪೊಲೀಸರ ಪರ ವಾದ ಮಂಡಿಸಿದ್ದ ವಕೀಲ ರಜತ್ ನಾಯರ್, ತನಿಖೆಯ ಮಾಹಿತಿ ಪೊಲೀಸರ ಕಡೆಯಿಂದ ಸೋರಿಕೆ ಆಗಿಲ್ಲ ಎಂದಿದ್ದಾರೆ.
ದಿಶಾ ರವಿ ಅವರ ಚಾಟ್‌ಗಳ ಮಾಹಿತಿಯನ್ನು ಪೊಲೀಸರು ಸೋರಿಕೆ ಮಾಡಿದ್ದಾರೆ ಎಂಬ ಆರೋಪವು ಸುಳ್ಳು ಮತ್ತು ವಾಸ್ತವಿಕವಾಗಿ ತಪ್ಪು ಎಂದು ವಕೀಲರ ಅಮಿತ್ ಮಹಾಜನ್ ಮೂಲಕ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಲು ಟೂಲ್‌ಕಿಟ್ ಪ್ರಕರಣದಲ್ಲಿ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಫೆಬ್ರವರಿ 13 ರಂದು ಬಂಧಿಸಲಾಗಿತ್ತು. ದೆಹಲಿಯ ಟ್ರಯಲ್ ಕೋರ್ಟ್ ಫೆಬ್ರವರಿ 23 ಜಾಮೀನು ನೀಡಿತ್ತು.