ಹೈದರಾಬಾದ್: ಟಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಪುರಿ ಜಗನ್ನಾಥ್ ಇಂದು ಜಾರಿ ನಿರ್ದೇಶನಾಲಯ(ಇಡಿ)ದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ವಿಚಾರವಾಗಿ ಇಡಿ ಅಧಿಕಾರಿಗಳು ಪುರಿ ಜಗನ್ನಾಥ್ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗ್ತಿದೆ.
ಪ್ರಕರಣ ಸಂಬಂಧ ಮನಿ ಲಾಂಡರಿಂಗ್ ಕಾಯ್ದೆಅಡಿ ಈಗಾಗಲೇ ತೆಲುಗು ಚಿತ್ರರಂಗದ 12 ಖ್ಯಾತ ತಾರೆಗಳಿಗೆ ಇಡಿ ನೋಟಿಸ್ ನೀಡಿದೆ. ಇಂದಿನಿಂದ ಆರಂಭವಾಗಿರುವ ವಿಚಾರಣೆ ಸೆಪ್ಟೆಂಬರ್ 22 ರವರೆಗೆ ಮುಂದುವರಿಯುತ್ತದೆ. ನಟಿ ಚಾರ್ಮಿ ಸೆ. 2 ರಂದು, ನಟಿ ರಕುಲ್ ಪ್ರೀತ್ ಸಿಂಗ್ ಸೆ.6 ರಂದು, ರಾಣಾ ದಗ್ಗುಬಾಟಿ ಸೆ. 8ರಂದು, ರವಿತೇಜ ಮತ್ತು ಶ್ರೀನಿವಾಸ್ ಸೆ. 9ರಂದು, ನವದೀಪ್ ಜೊತೆಗೆ ಎಫ್-ಕ್ಲಬ್ ಮ್ಯಾನೇಜರ್ ಸೆ.13 ರಂದು, ಮುಮತ್ ಖಾನ್ ಸೆ. 15 ರಂದು, ನಟ ತನೀಶ್ ಸೆ.17 ರಂದು ಹಾಗೂ ನಟ ತರುಣ್ ಸೆ.22ರಂದು ವಿಚಾರಣೆಗೆ ಹಾಜರಾಗಲಿದ್ದಾರೆ.
ಇದನ್ನೂ ಓದಿ: ಟಾಲಿವುಡ್ ಡ್ರಗ್ಸ್ ಕೇಸ್: ಪ್ರಕರಣದಲ್ಲಿ 60 ಮಂದಿ, ರಾಣಾ, ರಾಕುಲ್, ರವಿತೇಜ್ ವಿಚಾರಣೆಗೆ ಸಿದ್ಧತೆ!
ಟಾಲಿವುಡ್ ಡ್ರಗ್ಸ್ ಕೇಸ್:
2017ರಲ್ಲಿ ತೆಲಂಗಾಣ ಪೊಲೀಸರು ಸುಮಾರು 30 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದರು. ಇದಾದ ಬಳಿಕ ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಮಹತ್ವದ ಮಾಹಿತಿಗಳು ಲಭ್ಯವಾಗಿದ್ದವು. 60 ಜನರ ವಿಚಾರಣೆಯ ನಂತರ, 8 ಆಫ್ರಿಕನ್ ಪ್ರಜೆಗಳು ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಆಗಿರುವುದು ಕೂಡ ಕಂಡು ಬಂದಿತ್ತು. ಇದರಲ್ಲಿ ತೆಲುಗು ಚಿತ್ರರಂಗದ ತಾರೆಯರು ಭಾಗಿಯಾಗಿದ್ದಾರಾ ಎಂಬುದನ್ನು ತಿಳಿಯಲು ವಿಚಾರಣೆಯನ್ನು ಇಡಿ ಆರಂಭಿಸಿದೆ. ಆದರೆ 12 ತಾರೆಯರ ಹೆಸರನ್ನು ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.