ಬಂದಾ (ಉತ್ತರ ಪ್ರದೇಶ): ಮನೆಗೆ ಹೊಕ್ಕ ನಾಗರ ಹಾವನ್ನು ಓಡಿಸಲು ಕುಟುಂಬಸ್ಥರು, ಹಸುವಿನ ಸಗಣಿಯ ಬೆರಣಿಯನ್ನು ಹೊತ್ತಿಸಿ, ಅದರ ಹೊಗೆಯಿಂದ ನಾಗರ ಹಾವನ್ನು ಓಡಿಸಲು ಪ್ರಯತ್ನ ಮಾಡಿತ್ತು. ಆದರೆ ಬೆರಣಿಗೆ ಹೊತ್ತಿದ ಕಿಡಿ, ಬೆಂಕಿಯ ಜ್ವಾಲೆಯಾಗಿ ಮಾರ್ಪಟ್ಟು ಮನೆಗೆ ಬೆಂಕಿ ಆವರಿಸಿದ್ದರಿಂದ ಸುಟ್ಟು ಕರಕಲಾಗಿದೆ. ಈ ಬಗ್ಗೆ ಉತ್ತರ ಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ನಡೆದಿದ್ದು ಹೇಗೆ?: ಬಂದಾ ಜಿಲ್ಲೆಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಕುಟುಂಬದವರು ತಮ್ಮ ಮನೆಯಲ್ಲಿ ನಾಗರ ಹಾವು ಇರುವುದನ್ನು ಕಂಡಿದ್ದಾರೆ. ಇದರಿಂದ ಭಯಭೀತರಾದ ಅವರು, ನಾಗರ ಹಾವನ್ನು ಓಡಿಸಲು ಬೆರಣಿಯನ್ನು ಹಚ್ಚಿದ್ದಾರೆ. ಆದರೆ, ಬೆರಣಿಗೆ ಹಚ್ಚಿದ ಬೆಂಕಿ ಕಿಡಿ ದಗ್ಗನೇ ಹೊತ್ತಿ ಮನೆಗೆಲ್ಲ ಬೆಂಕಿ ವ್ಯಾಪಿಸಿಕೊಂಡಿದೆ.
ಇದರಿಂದಾಗಿ ಮನೆ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಹೀಗೆ ಅಚಾನಕ್ ಆದ ಘಟನೆಯಿಂದ ಮನೆಯಲ್ಲಿದ್ದ ನಗದು, ಚಿನ್ನಾಭರಣಗಳು ಮತ್ತು ಹಲವಾರು ಕ್ವಿಂಟಲ್ ಧಾನ್ಯಗಳು ಸುಟ್ಟು ಬೂದಿಯಾಗಿವೆ. ತಾನೊಂದು ಬಗೆದರೆ ದೈವವೊಂದು ಬಗೆದೀತು ಎಂಬಂತೆ, ಹಾವು ಓಡಿಸಲು ಕುಟುಂಬದವರು ಹೊಗೆ ಹಾಕಿದ್ದರು. ಆದರೆ ಅದು ಬೆಂಕಿಯ ಜ್ವಾಲೆಯಾಗಿ ಪ್ರಜ್ವಲಿಸಿ ಇಡೀ ಮನೆಯನ್ನೇ ಆಪೋಷನ ಪಡೆದಿದೆ. ಇದರಿಂದಾಗಿ ಮನೆಯವರು ದಿಕ್ಕು ತೋಚದಂತಾಗಿದ್ದಾರೆ.
ದೆಹಲಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ರಾಜ್‌ಕುಮಾರ್, ಪತ್ನಿ ಮತ್ತು ಐವರು ಮಕ್ಕಳೊಂದಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಘಟನೆಯಿಂದ ಅತ್ಯಂತ ಶ್ರಮ ಪಟ್ಟು ನಿರ್ಮಿಸಿದ ಮನೆ, ಜೀವಮಾನದ ಉಳಿತಾಯ, ಆಸ್ತಿ ಸೇರಿದಂತೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆದು ದಿಢೀರ್ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ದುರ್ಘಟನೆ ಬಗ್ಗೆ ಕಂದಾಯ ಇಲಾಖೆಗೂ ಮಾಹಿತಿ ನೀಡಲಾಗಿದ್ದು, ಸದ್ಯ ಹಾನಿಯ ಪ್ರಮಾಣವನ್ನು ಅಂದಾಜಿಸಲಾಗುತ್ತಿದೆ.
ಘಟನೆ ಬಗ್ಗೆ ಪೊಲೀಸರು ಹೇಳಿದ್ದಿಷ್ಟು: ಮತ್ತೊಂದು ಕಡೆ, ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ‘ಹಾವು ಓಡಿಸಲು ಹೊಗೆ ಹಾಕಲು ಯತ್ನಿಸಿದೆವು. ಆದರೆ ದಿಢೀರ್ ಎಂದು ಬೆಂಕಿ ಹೊತ್ತಿಕೊಂಡಿತು ಎಂದು ಕುಟುಂಬದವರು ಹೇಳುತ್ತಿದ್ದಾರೆ, ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಘಟನೆಯ ಮಾಹಿತಿ ನೀಡಿದ್ದಾರೆ. (ಐಎಎನ್ಎಸ್)
ಇದನ್ನು ಓದಿ:ಕೇರಳ ಪ್ರಾರ್ಥನಾ ಸಭೆಯಲ್ಲಿ ಸ್ಫೋಟ ಪ್ರಕರಣ: ಘಟನೆಯ ಹೊಣೆ ಹೊತ್ತು ಪೊಲೀಸರಿಗೆ ಶರಣಾದ ವ್ಯಕ್ತಿ