ಚೆನ್ನೈ(ತಮಿಳುನಾಡು): ಸಾಧಿಸಬೇಕೆಂಬ ಛಲ, ಗೌರವಯುತ ಜೀವನ ಬೇಕೆಂಬ ಗುರಿಯನ್ನು ಬೆನ್ನಟ್ಟಿದ ತಮಿಳುನಾಡಿನ ತೃತೀಯ ಲಿಂಗಿಯೊಬ್ಬರು ವಕೀಲಿಕೆ ಕಲಿತು, ಬಾರ್ ಕೌನ್ಸಿಲ್ನಲ್ಲಿ ನೋಂದಣಿ ಪಡೆದಿದ್ದಾರೆ. ಈ ಮೂಲಕ ರಾಜ್ಯದಲ್ಲಿಯೇ ಮೊದಲ ತೃತೀಯಲಿಂಗಿ ವಕೀಲೆ ಎಂಬ ದಾಖಲೆ ಬರೆದಿದ್ದಾರೆ.
ಪಿ.ಎಸ್. ಕಣ್ಮಣಿ ಮೊದಲ ತೃತೀಯಲಿಂಗಿ ವಕೀಲೆ. ತಮಿಳುನಾಡಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಕಣ್ಮಣಿಗೆ ಬಾರ್ ಕೌನ್ಸಿಲ್ ಅಧ್ಯಕ್ಷ ಅಮಲರಾಜ್ ಕಾನೂನು ನೋಂದಣಿ ಪ್ರಮಾಣಪತ್ರ ನೀಡಿದರು.
ಮನೆಯಿಂದ ದೂರ, ಶಿಕ್ಷಣಕ್ಕೆ ಹತ್ತಿರ: ಚೆನ್ನೈನ ವೆಲಚೇರಿಯಲ್ಲಿ ಜನಿಸಿದ ಕಣ್ಮಣಿ ಮೊದಲು ಹುಡುಗನಾಗಿದ್ದ. ಈತನಿಗೆ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಇದ್ದರು. ಕುಟುಂಬದ ಕೊನೆಯ ಮಗನಾಗಿದ್ದ ಕಣ್ಮಣಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸುವಾಗ ಲಿಂಗ ಪರಿವರ್ತನೆಗೆ ಒಳಗಾಗುತ್ತಿದ್ದ. ಇದನ್ನು ಗಮನಿಸಿದ ಮನೆಯವವರು ಮಗನನ್ನು ಕುಟುಂಬದಿಂದಲೇ ದೂರವಿಟ್ಟರು. 2017 ರಲ್ಲಿ ತನ್ನ 12 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, ಅವಳಾಗಿ ಬದಲಾದ ಕಣ್ಮಣಿ ಕುಟುಂಬದಿಂದ ಸಂಪೂರ್ಣವಾಗಿ ದೂರವಾದಳು.
ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಪುದುಚೇರಿಯ ಚೆಂಗಲ್ಪಟ್ಟು ಜಿಲ್ಲೆಯ ಡಾ.ಅಂಬೇಡ್ಕರ್ ಸರ್ಕಾರಿ ಕಾನೂನು ಕಾಲೇಜಿನಲ್ಲಿ 5 ವರ್ಷಗಳ ಕಾನೂನು ಕೋರ್ಸ್ ಪೂರ್ಣಗೊಳಿಸಿದಳು. ವಕೀಲಿಕೆ ಆರಂಭಿಸಲು ಬಾರ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿಕೊಂಡ ಕಣ್ಮಣಿಗೆ ಅಧ್ಯಕ್ಷರೇ ನೋಂದಣಿ ಪತ್ರ, ಗುರುತಿನ ಚೀಟಿ ವಿತರಿಸಿದ್ದಾರೆ. ಈ ಮೂಲಕ ಸರ್ಕಾರಿ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ವಕೀಲರಾಗಿ ನೋಂದಣಿಯಾದ ಮೊದಲ ತೃತೀಯಲಿಂಗಿ ಎಂಬ ಹೆಗ್ಗಳಿಕೆಗೆ ಕಣ್ಮಣಿ ಪಾತ್ರರಾದರು.
ಮನೆಯವರಿಂದ ಹೊರತಳ್ಳಲ್ಪಟ್ಟರೂ ವಿದ್ಯಾರ್ಥಿಗಳು, ಶಿಕ್ಷಕರು, ಪ್ರಾಧ್ಯಾಪಕರು ನನ್ನ ಶಿಕ್ಷಣಕ್ಕೆ ಸಹಾಯ ಮಾಡಿದರು. ಲಾ ಓದು ಮುಗಿಸಿದ್ದು, ಸಿವಿಲ್ ನ್ಯಾಯಾಧೀಶರ ಪರೀಕ್ಷೆ ಎದುರಿಸುವ ಗುರಿ ಹೊಂದಿದ್ದೇನೆ. ವೆಲಚೇರಿಯ ಚಂದೂರು ಕಾನೂನು ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದೇನೆ ಎಂದು ಕಣ್ಮಣಿ ಅವರು ಹೇಳಿದರು.
ಓದಿ: ಇದು 1962 ಅಲ್ಲ.. ಚೀನಾಗೆ ಅರುಣಾಚಲಪ್ರದೇಶ ಸಿಎಂ ಪೆಮಾ ಖಂಡು ಖಡಕ್ ವಾರ್ನಿಂಗ್