ಚೆನ್ನೈ (ತಮಿಳುನಾಡು): ಈಶಾನ್ಯ ಮಾನ್ಸೂನ್ ಮಳೆ ತಮಿಳುನಾಡಿನಲ್ಲಿ ತೀವ್ರಗೊಳ್ಳುತ್ತಿರುವ ಕಾರಣ, ತಮಿಳುನಾಡಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಈ ರಾಜ್ಯದಲ್ಲಿ, ಮುಂಬರುವ 3 ದಿನಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕನಿಷ್ಠ 5 ಸಾವು, 120 ಮನೆಗಳಿಗೆ ಹಾನಿ:
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಇತ್ತೀಚೆಗೆ ತಮಿಳುನಾಡಿನಲ್ಲಿ ಸುರಿದ ಭಾರಿ ಮಳೆಯಿಂದ ಕನಿಷ್ಠ 5 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರ ತಿಳಿಸಿದ್ದಾರೆ. ತಿರುವಣ್ಣಾಮಲೈನಲ್ಲಿ ಇಬ್ಬರು ಹಾಗೂ ರಿಯಲೂರು, ದಿಂಡಿಗಲ್ ಮತ್ತು ಶಿವಗಂಗಾ ಜಿಲ್ಲೆಗಳಲ್ಲಿ ಮೂರು ಮಂದಿ, 152 ಜಾನುವಾರುಗಳು ಸಾವನ್ನಪ್ಪಿವೆ. 681 ಗುಡಿಸಲು ಹಾಗೂ 120 ಮನೆಗಳಿಗೆ ಹಾನಿಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ:
ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಶನಿವಾರ ರೆಡ್ ಅಲರ್ಟ್ ಘೋಷಿಸಲಾಗಿದೆ. ಚೆನ್ನೈ, ಚೆಂಗಲ್ಪಟ್ಟು, ತಿರುನಲ್ವೇಲಿ, ತೂತುಕುಡಿ, ರಾಮನಾಥಪುರಂ, ಕರಿಕಲ್, ನಾಗಪಟ್ಟಣಂ, ಪುದುಕೊಟ್ಟೈ ಮತ್ತು ಮೈಲಾಡುತುರೈ, ಪುದುಚೇರಿ ಮತ್ತು ಕಾರೈಕಾಲ್‌ನಲ್ಲಿ ನ.29ರ ವರೆಗೆ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಕನ್ಯಾಕುಮಾರಿ ಮತ್ತು ಶ್ರೀಲಂಕಾದ ಕೆಲವು ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತ ಸಂಭವಿಸುವುದರಿಂದ, ಈ ಕೆಳಗಿನ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಬಹುದು ಎಂದು ಮೂನ್ಸೂಚನೆ ನೀಡಲಾಗಿದೆ.
ರೆಡ್ ಅಲರ್ಟ್ ಜಿಲ್ಲೆಗಳು:
- ಚೆನ್ನೈ
- ತಿರುವಳ್ಳೂರ್
- ಕಾಂಚೀಪುರಂ
- ಸೆಂಗಲ್ಪಟ್ಟು
- ವಿಲುಪುರಂ
- ಪುದುಚೇರಿ
- ಕೂಡಲೂರು
- ಕಾರೈಕಲ್ (ಪುದುಚೇರಿ ರಾಜ್ಯ)
- ಮೈಲಾಡುತುರೈ
- ತಂಜಾವೂರು
- ತಿರುವಾರೂರ್
- ನಾಗಪ್ಪಟ್ಟಣಂ
- ಪುದುಕ್ಕೊಟ್ಟೈ
- ರಾಮನಾಥಪುರ
- ಟುಟಿಕೋರಿನ್
- ತಿರುನೆಲ್ವೇಲಿ
- ತೆಂಕಶಿ
ಆರೆಂಜ್ ಅಲರ್ಟ್ ಜಿಲ್ಲೆಗಳು:
- ರನ್ನಿಪೆಟ್ಟೈ
- ವೆಲ್ಲೂರು
- ತಿರುವಣ್ಣಾಮಲೈ
- ಕಲ್ಲಕುರಿಚಿ
- ಪೆರುಂಬಲೂರ್
- ಅರಿಯಲೂರು
- ತಿರುಚ್ಚಿ
- ಮಧುರೈ
- ಶಿವಗಂಗೈ
- ವಿರುದು ನಗರ
ಯೆಲ್ಲೋ ಅಲರ್ಟ್ ಜಿಲ್ಲೆ: ಕನ್ಯಾಕುಮಾರಿ
ಶಾಲೆ ಮತ್ತು ಕಾಲೇಜುಗಳಿಗೆ ರಜೆ ಇರುವ ಜಿಲ್ಲೆಗಳು:
ಚೆನ್ನೈ, ಕಾಂಚಿಪುರಂ, ಚೆಂಗಲ್ಪಟ್ಟು, ಟ್ಯೂಟಿಕೋರಿನ್, ತಿರುವಳ್ಳೂರ್, ತಿರುನೆಲ್ವೇಲಿ, ಪುದುಕ್ಕೊಟ್ಟೈ, ಸೇಲಂ, ತಿರುವಣ್ಣಾಮಲೈ, ಕಡಲೂರು, ವಿಲುಪ್ಪುರಂ, ಅರಿಯಲೂರು, ರಾಮನಾಥಪುರ, ತಿರುಚ್ಚಿ, ರನ್ನಿಪೆಟ್ಟೈ, ಕಲ್ಲಕ್ಕುರಿಚಿ, ತಂಜೂರ, ನಾಗಪಟ್ಟಿಣಂ, ತಿರುವಾರೂರ್, ಪೆರಂಬಲೂರು, ಮೈಲಾಡುತುರೈ ಹಾಗು ದಿಂಡಿಗಲ್‌ನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ತಿರುನೆಲ್ವೇಲಿಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪಶ್ಚಿಮ ಘಟ್ಟಗಳ ಸಮೀಪವಿರುವ ಅಣೆಕಟ್ಟುಗಳಲ್ಲಿ ನೀರಿನ ಪೂರೈಕೆಯಲ್ಲಿ ಹೆಚ್ಚಳವಾಗಿದೆ. ಪಾಪನಾಶಂ ಕರಾಯರ್ ಅಣೆಕಟ್ಟು, ಸರ್ವಲಾರು ಅಣೆಕಟ್ಟುಗಳಲ್ಲಿ ಸುಮಾರು 20 ಘನ ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಪಾಪನಾಸಂ ಅಗಸ್ತಿಯಾರ್ ಜಲಪಾತದಲ್ಲಿ ಪ್ರವಾಹ ಉಂಟಾಗಿದ್ದು, ಸೋರಿ ಮುತ್ತು ಅಯ್ಯನಾರ್ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ಈಗ ನಿಷೇಧಿಸಲಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ವಾಯು ಗುಣಮಟ್ಟ ಮತ್ತಷ್ಟು ಕಳಪೆ: AQI 386ಕ್ಕೆ ಇಳಿಕೆ