ಧರ್ಮಪುರಿ (ತಮಿಳುನಾಡು): ಜನವರಿ 8ರಂದು ಪಾಪ್ಪಿರೆಡ್ಡಿಪಟ್ಟಿ ಬಳಿಯ ಬೊಮ್ಮಿಡಿ ಪ್ರದೇಶದಲ್ಲಿ ನಡೆದಿದ್ದ ‘ಎನ್ ಮನ್ ಎನ್ ಮಕ್ಕಳ್’( ನಮ್ಮ ಭೂಮಿ, ನಮ್ಮ ಜನ) ರ‍್ಯಾಲಿ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು, ವಾಗ್ವಾದ ನಡೆಸಿ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಧಾರ್ಮಿಕ ದ್ವೇಷವನ್ನು ಉತ್ತೇಜಿಸಿದ ಆರೋಪದ ಹಿನ್ನೆಲೆ ಧರ್ಮಪುರಿ ಪೊಲೀಸರು ಕೆ. ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿ. ಪಲ್ಲಿಪಟ್ಟಿಯಲ್ಲಿರುವ ಸೈಂಟ್ ಲೂರ್ಡ್ಸ್ ಚರ್ಚ್‌ನಲ್ಲಿರುವ ಮೇರಿ ಪ್ರತಿಮೆಗೆ ಮಾಲೆ ಹಾಕಲು ಯತ್ನಿಸಿದ್ದ ಸಮಯದಲ್ಲಿ ಅಣ್ಣಾಮಲೈ ಅವರು ವಿವಾದಕ್ಕೆ ಒಳಗಾಗಿದ್ದರು. ಕ್ರಿಶ್ಚಿಯನ್ ಯುವಕರ ಗುಂಪು ಮಣಿಪುರ ಸಮಸ್ಯೆಯನ್ನು ಉಲ್ಲೇಖಿಸಿ ಚರ್ಚ್‌ಗೆ ಅವರ ಪ್ರವೇಶವನ್ನು ವಿರೋಧಿಸಿತ್ತು. ಅವರ ವಿರುದ್ಧ ಘೋಷಣೆಗಳನ್ನು ಕೂಗಿತ್ತು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಅಣ್ಣಾಮಲೈ ಅವರು, ಮಣಿಪುರ ಸಮಸ್ಯೆಯನ್ನು ವಿವರಿಸುತ್ತ ಯುವಕರೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದರು. ಈ ವಿಡಿಯೋದಲ್ಲಿ ಅಣ್ಣಾಮಲೈ ಅವರು ನೀವು ಕೂಡ ಡಿಎಂಕೆಯಂತೆ ಮಾತನಾಡಬೇಡಿ. ಇದು ಸಾರ್ವಜನಿಕ ಸ್ಥಳವಾಗಿದೆ. ನನ್ನನ್ನು ತಡೆಯಲು ನಿಮಗೆ ಯಾವ ಹಕ್ಕಿದೆ? ನಾನು 10,000 ಜನರನ್ನು ಒಟ್ಟುಗೂಡಿಸಿ ಧರಣಿ ನಡೆಸಿದರೆ ನೀವೇನು ಮಾಡುತ್ತೀರಿ? ವಿರೋಧದ ನಡುವೆಯೂ ಪೊಲೀಸರ ಮಧ್ಯಸ್ಥಿಕೆಯೊಂದಿಗೆ ಅಣ್ಣಾಮಲೈ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು.
ಕಾರ್ತಿಕ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಧರ್ಮಪುರಿ ಜಿಲ್ಲೆಯ ಬೊಮ್ಮಿಡಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 153 (ಎ), 504 ಮತ್ತು 505 (2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಘಟಕವು, ಅಣ್ಣಾಮಲೈ ಚರ್ಚ್ ಪ್ರವೇಶವನ್ನು ವಿರೋಧಿಸುತ್ತಿರುವ ಗುಂಪು ಆಡಳಿತ ಪಕ್ಷವಾದ ಡಿಎಂಕೆಗೆ ಸೇರಿದೆ ಎಂದು ಆರೋಪಿಸಿದೆ. ಈ ವಾಗ್ವಾದಕ್ಕೆ ಸಂಬಂಧಿಸಿದಂತೆ ಅಣ್ಣಾಮಲೈ ವಿರುದ್ಧ ತೆಗೆದುಕೊಂಡಿರುವ ಕಾನೂನು ಕ್ರಮಕ್ಕೆ ಡಿಎಂಕೆ ಸರ್ಕಾರವನ್ನು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: ಪವನ್ ಕಲ್ಯಾಣ್ ಭೇಟಿಯಾದ ಅಂಬಟಿ ರಾಯುಡು; ವೈಎಸ್ಆರ್ಸಿಪಿ ತೊರೆಯಲು ಕಾರಣ ತಿಳಿಸಿದ ಮಾಜಿ ಕ್ರಿಕೆಟಿಗ