ಚೆನ್ನೈ (ತಮಿಳುನಾಡು): ತಮಿಳುನಾಡಿನ ತಿರುನೆಲ್ವೇಲಿ ಮತ್ತು ದಿಂಡಿಗಲ್ನಲ್ಲಿ 5 ದಿನಗಳ ಅವಧಿಯಲ್ಲಿ ನಡೆದಿದ್ದ ನಾಲ್ವರು ಕೊಲೆ ಪ್ರಕರಣ ಜನರನ್ನು ಬೆಚ್ಚಿಬೀಳಿಸಿತ್ತು. ಪ್ರಕರಣದಿಂದ ಎಚ್ಚೆತ್ತ ಪೊಲೀಸ್ ಇಲಾಖೆ ವಿವಿಧೆಡೆ ಕಾರ್ಯಾಚರಣೆಗೆ ಮುಂದಾಗಿದ್ದು, ಸಾವಿರಾರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಪ್ರಕರಣ ಹಿನ್ನೆಲೆ ಆರೋಪಿಗಳು ಸೇರಿದಂತೆ ಹಲವು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಪತ್ತೆ ಮಾಡಲು ‘ಆಪರೇಷನ್ ನಿರಾಯುಧ’ ಆರಂಭಿಸಿದ್ದರು. ಈ ವೇಳೆ, ನಗರದ ಹಲವೆಡೆ ದಾಳಿ ನಡೆಸಿ 3000ಕ್ಕೂ ಅಧಿಕ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಆರೋಪಿಗಳು ಮತ್ತು ಶಂಕಿತರನ್ನು ಬಂಧಿಸಲು ದಾಳಿಗಳನ್ನು ನಡೆಸಲಾಗಿತ್ತು. ಈ ವೇಳೆ, 3,325 ಮಂದಿ ಕೊಲೆ ಆರೋಪಿಗಳನ್ನು ಬಂಧಿಸಲಾಯಿತು ಮತ್ತು ಅವರಿಂದ 1,000 ಚಾಕುಗಳು ಮತ್ತು 7 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಧುರೈ ಮತ್ತು ತಿರುನೆಲ್ವೇಲಿಯಲ್ಲಿ ನಡೆದ ಎರಡು ಉನ್ನತ ಮಟ್ಟದ ಸಭೆಗಳಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಿ. ಸಲೇಂದ್ರ ಬಾಬು ಅವರು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಈ ಹಿಂದೆ ಕೊಲೆ, ಗಲಭೆ ಮತ್ತು ಹಲ್ಲೆಯಲ್ಲಿ ಭಾಗಿಯಾಗಿದ್ದ ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ್ದರು. ಸೇಡು ಹತ್ಯೆಗಳ ಇತಿಹಾಸವನ್ನು ಅಧ್ಯಯನ ಮಾಡಲು ಮತ್ತು ಇದಕ್ಕಾಗಿ ಸಂಚು ರೂಪಿಸುವ ಎಲ್ಲ ಆರೋಪಿಗಳ ಬಂಧಿಸಲು ತಿಳಿಸಲಾಗಿತ್ತು. ಬಳಿಕ ಈ ಎರಡೂ ನಗರದಲ್ಲಿ ನಡೆದ ಕಾರ್ಯಾಚರಣೆ ವೇಳೆ 3,325 ಮಂದಿಯನ್ನ ಬಂಧಿಸಲಾಗಿದೆ.
ಅಲ್ಲದೇ ನಗರದಲ್ಲಿ ಕಬ್ಬಿಣ ಕೆಲಸ, ಚಾಕು ಮಾರಾಟಗಾರರು ಮತ್ತು ಅಕ್ಕಸಾಲಿಗರು ಸೇರಿದಂತೆ ಇಂತಹ ಹರಿತ ವಸ್ತು ಮಾರಾಟಗಾರರ ಸಭೆ ಕರೆಯಲಾಗಿತ್ತು. ಅವರ ಬಳಿ ಹರಿತವಾದ ವಸ್ತುಗಳ ಖರೀದಿಸುವವರ ಹೆಸರು, ಮೊಬೈಲ್ ನಂಬರ್ ಸೇರಿದಂತೆ ವಸ್ತು ಖರೀದಿಯ ಕಾರಣ ದಾಖಲಿಸುವಂತೆ ಸೂಚಿಸಲಾಗಿತ್ತು. ನಗರದ 579 ಕಡೆ ನಡೆಸಲಾಗಿದ್ದ ಸಭೆಯಲ್ಲಿ ಸುಮಾರು 2,500 ಮಂದಿ ಭಾಗಿಯಾಗಿದ್ದರು. ಜೊತೆಗೆ ಅವರಿಂದ ಮಾರಾಟವಾದ ವಸ್ತುಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿರುವಂತೆಯೂ ಸೂಚಿಸಲಾಗಿತ್ತು.
ಇದನ್ನೂ ಓದಿ: Breaking News... Air Indiaವನ್ನು ಮತ್ತೆ ತನ್ನ ಸ್ವಾಧೀನಕ್ಕೆ ಪಡೆಯುವಲ್ಲಿ ಯಶಸ್ವಿಯಾದ TATA ಗ್ರೂಪ್.. ವರದಿ