ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡ ರಾಜೀವ್ ಬ್ಯಾನರ್ಜಿ ನಿನ್ನೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡುವಾಗ ಭಾವುಕರಾಗಿದ್ದಾರೆ.
ಇಂತಹ ಕಠಿಣ ನಿರ್ಧಾರ ತೆಗದುಕೊಳ್ಳುವ ದಿನವೊಂದು ಬರುತ್ತದೆ ಎಂದು ನಾನೆಂದಿಗೂ ಯೋಚಿಸಿರಲಿಲ್ಲ. ನಾನು ಸದಾ ಜನರ ಸೇವೆ ಮಾಡಲು ಬಯಸುತ್ತೇನೆ. ಆದರೆ ನಾನು ಮಾನಸಿಕವಾಗಿ ನೊಂದಿದ್ದೇನೆ, ನನ್ನ ಹೃದಯ ನೊಂದಿದೆ. ತೊಂದರೆಗಳನ್ನು ಅನುಭವಿಸಿದ್ದೇನೆ. ಇಷ್ಟು ವರ್ಷಗಳ ಕಾಲ ಸಿಎಂ ಮಮತಾ ಬ್ಯಾನರ್ಜಿ ನನಗೆ ಮಾರ್ಗದರ್ಶನ ನೀಡಿದ್ದರು, ಅವರಿಗೆ ಕೃತಜ್ಞತೆಗಳು ಎಂದು ರಾಜೀವ್ ಬ್ಯಾನರ್ಜಿ ಬೇಸರ ವ್ಯಕ್ತಪಡಿಸಿದರು.
ಬಂಗಾಳದ ಜನರಿಗಾಗಿ ಮುಂದೆ ಕೂಡ ಕೆಲಸ ಮಾಡಲು ಬದ್ಧನಾಗಿರುವೆ. ನನ್ನ ಕೆಲಸದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿರುವ ಕೆಲವು ನಾಯಕರು ಇದ್ದಾರೆ. ಅಂತವರಿಗೆ ಉನ್ನತ ಸ್ಥಾನದಲ್ಲಿರುವ ನಾಯಕರು ಏನನ್ನೂ ಹೇಳದಿರುವುದನ್ನು ಕಂಡು ನನಗೆ ಬೇಸರವಾಗಿದೆ ಎಂದರು.
ಇದನ್ನೂ ಓದಿ: ಟಿಎಂಸಿಗೆ ಕೈ ಕೊಟ್ಟ ರಾಜೀವ್ ಬ್ಯಾನರ್ಜಿ.. ಸಚಿವ ಸ್ಥಾನಕ್ಕೆ ರಾಜೀನಾಮೆ..!
ಈ ವರ್ಷ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಟಿಎಂಸಿಯ ಅನೇಕ ನಾಯಕರು ಪಕ್ಷ ತೊರೆಯುತ್ತಿದ್ದು, ಕೆಲ ಸಚಿವರು ರಾಜೀನಾಮೆ ನೀಡಿ ಮಮತಾ ಬ್ಯಾನರ್ಜಿಗೆ ಆಘಾತ ನೀಡುತ್ತಿದ್ದಾರೆ. ಮಾಜಿ ಸಚಿವ ಸುವೆಂದು ಅಧಿಕಾರಿ ಸೇರಿದಂತೆ ಅನೇಕರು ಈಗಾಗಲೇ ಬಿಜೆಪಿ ಸೇರಿದ್ದಾರೆ.
ನಿನ್ನೆ ತಮ್ಮ ಸಚಿವ ಸ್ಥಾನಕ್ಕೆ ರಾಜೀವ್ ಬ್ಯಾನರ್ಜಿ ರಾಜೀನಾಮೆ ನೀಡಿದ್ದು, ರಾಜ್ಯಪಾಲ ಜಗದೀಪ್ ಧನ್ಕರ್ ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದಾರೆ.