ಬೇಸಿಗೆ ಮತ್ತು ಚಳಿಗಾಲದ ಋತುಗಳು ಆರೋಗ್ಯ ಮತ್ತು ಚರ್ಮದ ಮೇಲೆ ಹೆಚ್ಚು ಪರಿಣಾಮ ಉಂಟುಮಾಡುತ್ತದೆ. ಎಲ್ಲಾ ವಯಸ್ಸಿನವರೂ ಈ ಬದಲಾಗುವ ಹವಾಮಾನದ ಬಗ್ಗೆ ಜಾಗರೂಕರಾಗಿರ ಬೇಕಾಗುತ್ತದೆ. ಈಗ ವಿಶೇಷವಾಗಿ ಬೇಸಿಗೆಯ ಬಗ್ಗೆ ಮಾತನಾಡುವುದಾದರೆ, ನಿರ್ಜಲೀಕರಣ ಮತ್ತು ಚರ್ಮ-ಸಂಬಂಧಿತ ಸಮಸ್ಯೆಗಳು ತುಂಬಾ ಸಾಮಾನ್ಯ. ವಿಶೇಷವಾಗಿ ನವಜಾತ ಶಿಶುಗಳಿಗೆ ಬೇಸಿಗೆಯಲ್ಲಿ ಹೆಚ್ಚಿನ ಜಾಗರೂಕತೆ ವಹಿಸ ಬೇಕಾಗುತ್ತದೆ.
ಚಿಕ್ಕ ಮಕ್ಕಳಿಗೆ ಎದುರಾಗುವ ಸಮಸ್ಯೆಗಳು: ಬೇಸಿಗೆ ಧಗೆಯ ಪರಿಣಾಮವನ್ನು 1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಾಣಬಹುದು. ಸೆಖೆಗೆ ಮಕ್ಕಳನ್ನು ಫ್ಯಾನ್, ಕೂಲರ್ ಮತ್ತು ಏಸಿಯ ಅಡಿ ಮಲಗಿಸುವುದರಿಂದ ಮಗುವಿಗೆ ಶೀತ ಮತ್ತು ಮೂಗು ಸೋರುವುದು ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಮಗುವನ್ನು ಯಾವಾಗಲೂ ಚೆನ್ನಾಗಿ ಗಾಳಿ ಇರುವ ಕೋಣೆಯಲ್ಲಿ ಇರಿಸಬೇಕು. ಕೂಲರ್, ಫ್ಯಾನ್ ಅಥವಾ ಎಸಿಯ ನೇರ ಗಾಳಿಗೆ ಮಗುವನ್ನು ಒಡ್ಡಿಕೊಳ್ಳಬಾರದು. ಮಗುವನ್ನು ಎಸಿ ಇರುವ ಕೋಣೆಯಲ್ಲಿ ಮಲಗಿದ್ದರೂ, ತಾಪಮಾನವನ್ನು ನಿಯಂತ್ರಿಸಬೇಕು ಮತ್ತು ತುಂಬಾ ತಂಪಾಗಿರಬಾರದು ಎಂದು ಹರಿಯಾಣ ಮೂಲದ ಮಕ್ಕಳ ತಜ್ಞೆ ಡಾ. ಅನುಜಾ ದಾಗರ್ ಹೇಳುತ್ತಾರೆ.
6 ತಿಂಗಳಿಗಿಂತ ಮೇಲ್ಪಟ್ಟ ಮಕ್ಕಳ ಆಹಾರದ ಬಗ್ಗೆ ಹೆಚ್ಚು ಗಮನಹರಿಸುವ ಅವಶ್ಯಕತೆ ಇದೆ. ಆಹಾರದಲ್ಲಿ ಅಜಾಗರೂಕತೆಯಿಂದ ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳು ಆಗಬಹುದು. ಹೀಗಾಗಿ ಆಹಾರ ಗಂಜಿಯ ರೀತಿಯಲ್ಲಿ ಅರೆ ಘನ ಆಹಾರ ನೀಡುವುದು ಉತ್ತಮ. ಇದು ಪೋಷಣೆಯ ಜೊತೆಗೆ ಅವರ ದೇಹದ ನೀರಿನ ಅಗತ್ಯ ಸಹ ಪೂರೈಸುತ್ತದೆ.
ತಾಯಿಯ ಹಾಲಿನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ 6 ತಿಂಗಳೊಳಗಿನ ಶಿಶುಗಳ ಬಗ್ಗೆ ಹೇಳುವುದಾದರೆ, ತಾಯಿಯು ಮಗುವಿಗೆ ನಿಯಮಿತ ಮಧ್ಯಂತರದಲ್ಲಿ ಸ್ತನ್ಯಪಾನ ಮಾಡುವುದು ಮುಖ್ಯ. ಇದರಿಂದಾಗಿ ಮಗುವಿನ ದೇಹವು ನಿರ್ಜಲೀಕರಣಕ್ಕೆ ಒಳಗಾಗುವುದು ತಪ್ಪುತ್ತದೆ. ಜೊತೆಗೆ, ತಾಯಿಯು ನೀರು ಮತ್ತು ಇತರ ದ್ರವ ರೂಪದ ಪೌಷ್ಠಿಕ ಆಹಾರ ಸೇವನೆ ಮತ್ತು ಸುಲಭವಾಗಿ ಜೀರ್ಣಿಸಲು ಸಹಕಾರವಾಗುವ ಆಹಾರ ಸೇವನೆ ಮುಖ್ಯವಾಗುತ್ತದೆ.
ಯಾವಾಗ ಮತ್ತು ಎಷ್ಟು ನೀರು ಕೊಡಬೇಕು?: ತಾಯಿಯ ಹಾಲಿನಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ನೀರು ಇರುತ್ತದೆ. ಹಾಗಾಗಿ ಮಗುವಿಗೆ ಪ್ರತ್ಯೇಕವಾಗಿ ನೀರು ಕುಡಿಸುವ ಅಗತ್ಯವಿಲ್ಲ ಎಂದು ಡಾ.ಅನುಜಾ ತಿಳಿಸುತ್ತಾರೆ. ತಾಯಿಯ ಹಾಲು ಮಗುವಿಗೆ ಸಾಕಾಗುವಷ್ಟಿದ್ದರೆ ಹೆಚ್ಚು ನೀರಿನ ಅವಶ್ಯಕತೆ ಇರುವುದಿಲ್ಲ. ಹಾಲು ಕುಡಿದರೂ ನಿರ್ಜಲೀಕರಣಕ್ಕೆ ಒಳಗಾದರೆ ಸೂಕ್ತ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ. ಶಿಶುವಿಗೆ ನೀರು ಕುಡಿಸುವುದಾದರೆ ಕುಡಿಸಿ ಆರಿದ ನೀರು ಕೊಡುವುದು ಉತ್ತಮ ಎನ್ನುತ್ತಾರೆ.
ಅದೇ ರೀತಿ, 6-12 ತಿಂಗಳ ವಯಸ್ಸಿನ ಮಗು ಘನ ಆಹಾರದ ಜೊತೆಗೆ ಎದೆ ಹಾಲು ಕುಡಿಯುವುದರಿಂದ, ಮಗುವಿನ ದೇಹದ ನೀರಿನ ಅವಶ್ಯಕತೆಗಳನ್ನು ಹಾಲು ಹೆಚ್ಚಿನ ಪ್ರಮಾಣದಲ್ಲಿ ಪೂರೈಸಲಾಗುತ್ತದೆ. ತಾಪಮಾನವು ಹೊರಗೆ ತುಂಬಾ ಹೆಚ್ಚಿದ್ದು ಮತ್ತು ಮಗು ದೈಹಿಕವಾಗಿ ತುಂಬಾ ಸಕ್ರಿಯವಾಗಿದ್ದರೆ, ಕಡಿಮೆ ಅಂತರದಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಕೊಡಬೇಕಾಗುತ್ತದೆ.
ಚರ್ಮದ ಮೇಲೆ ಶಾಖದ ಪರಿಣಾಮ ತಪ್ಪಿಸುವುದು ಹೇಗೆ?: ಬೇಸಿಗೆಯಲ್ಲಿ ಮಗುವಿಗೆ ಸಡಿಲವಾದ ಹತ್ತಿ ಬಟ್ಟೆಗಳನ್ನು ಮಾತ್ರ ಧರಿಸುವುದು ಮುಖ್ಯ. ಇದು ಬೆವರನ್ನು ತಡೆಯುತ್ತದೆ. ಹತ್ತಿ ಬಟ್ಟೆಗೆ ಬೆವರು ಅಂಟುವುದರಿಂದ ಚರ್ಮದ ಸಮಸ್ಯೆ ಉಂಟಾಗಬಹುದು. ಮಕ್ಕಳಿಗೆ ಡೈಪರ್ ಹಾಕುವುದರಿಂದ ಸೆಕೆಯ ಗುಳ್ಳೆಗಳು ಆಗುವ ಸಂಭವವಿರುತ್ತದೆ. ಹೀಗಾಗಿ ಡೈಪರನ್ನು ಆಗಾಗ ಬದಲಾಯಿಸುತ್ತಿರುವುದು ಉತ್ತಮ. ಸಾಧ್ಯವಾದರೆ ಡೈಪರ್ ಹಾಕದಿರುವುದು ಈ ಋತುವಿನಲ್ಲಿ ಒಳ್ಳೆಯದು. ಡೈಪರ್ ಬದಲಿಗೆ ಹತ್ತಿ ಬಟ್ಟೆಯ ನ್ಯಾಪ್ಕಿನ್ಗಳನ್ನು ಬಳಸ ಬಹುದು ಎಂದು ಡಾ.ಅನುಜಾ ಸಲಹೆ ನೀಡುತ್ತಾರೆ.
ಬೇಸಿಗೆಯಲ್ಲಿ ನಿಮ್ಮ ಮಗುವಿಗೆ ಸ್ನಾನ ಮಾಡಿಸಿ, ಸಾಧ್ಯವಿಲ್ಲದಿದ್ದರೆ ಒದ್ದೆ ಹತ್ತಿ ಬಟ್ಟೆಯಿಂದ ಸ್ವಚ್ಛಗೊಳಿಸಿ. ಸ್ನಾನ ಅಥವಾ ಶುಚಿಗೊಳಿಸಿದ ನಂತರ, ಮಗುವಿನ ಚರ್ಮವು ಸಂಪೂರ್ಣವಾಗಿ ಶುಷ್ಕವಾಗಿರುತ್ತದೆ ಎಂದು ಖಚಿತಪಡಿಸಿಕೊಳ್ಳಿ, ನಂತರ ರಾಸಾಯನಿಕ ಮುಕ್ತ ಮತ್ತು ಕಡಿಮೆ ಪರಿಮಳಯುಕ್ತವಾದ ಟಾಲ್ಕಮ್ ಪೌಡರನ್ನು ತೋಳಿನ ಸಂದು, ಕುತ್ತಿಗೆ, ತೊಡೆಯಂತಹ ಹೆಚ್ಚು ಬೆವರುವ ಪ್ರದೇಶಗಳಿಗೆ ಬಳಸಬಹುದು.
ನೆನಪಿಡಿ!
ಎಲ್ಲಾ ಮುನ್ನೆಚ್ಚರಿಕೆಗಳ ನಂತರವೂ ದದ್ದುಗಳು, ಉಬ್ಬುಗಳು ಅಥವಾ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ಡಾ.ಅನುಜಾ ಹೇಳುತ್ತಾರೆ. ಮಗುವಿನ ಮೂತ್ರ ವಿಸರ್ಜನೆ ಮತ್ತು ಕರುಳಿನ ಚಲನೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ಗಮನ ಕೊಡಿ ಎಂದು ಸಲಹೆ ನೀಡುತ್ತಾರೆ.
ಇದನ್ನೂ ಓದಿ:ನಿಮ್ಮ ಆರೋಗ್ಯ ನಮ್ಮ ಕಾಳಜಿ: ಈ ಆಹಾರ ಪದ್ಧತಿ ಅನುಸರಿಸಿದರೆ ವೃದ್ಧಾಪ್ಯ ದೂರ!