ಜಗಿತ್ಯಾಲ(ತೆಲಂಗಾಣ): ಮೂವರು ಯುವತಿಯರು ಹತ್ತಿರದ ಸಂಬಂಧಿಗಳು. ಅವರ ನಡುವೆ ಹೆಚ್ಚಂದ್ರೆ ಒಂದೆರಡು ವರ್ಷ ವಯಸ್ಸಿನ ವ್ಯತ್ಯಾಸವಿತ್ತಷ್ಟೇ. ಒಂದೇ ಪ್ರದೇಶದಲ್ಲಿ ಆಡಿ, ಬೆಳೆದು ದೊಡ್ಡವರಾದ್ರು. ಪೋಷಕರು ಇವರ ಪೈಕಿ ಇಬ್ಬರಿಗೆ ಮದುವೆ ಮಾಡಿದ್ದಾರೆ. ಹಸೆಮಣೆ ತುಳಿದರೂ ಎರಡು ತಿಂಗಳ ಹಿಂದಿನವರೆಗೂ ಮೂವರ ಸ್ನೇಹ ಬಾಂಧವ್ಯ ಚೆನ್ನಾಗೇ ಇತ್ತು. ಆದ್ರೆ ಇದ್ದಕ್ಕಿದ್ದಂತೆ ಅದೇನಾಯ್ತೋ ಗೊತ್ತಿಲ್ಲ, ಇತ್ತೀಚಿಗೆ ಮೂವರು ಯುವತಿಯರೂ ಕೂಡಾ ಸಾವಿನ ಕದ ತಟ್ಟಿದ್ದಾರೆ.
ಘಟನೆಯ ವಿವರ:
ತೆಲಂಗಾಣದ ಜಗಿತ್ಯಾಲ ಪಟ್ಟಣದ ಉಪ್ಪರಿಪೇಟೆಯ ಎಕ್ಕಲದೇವಿ ಗಂಗಾಜಲ (19), ಎಕ್ಕಲದೇವಿ ವಂದನಾ (16) ಮತ್ತು ಗಾಂಧಿನಗರದ ಎಕ್ಕಲದೇವಿ ಮಲ್ಲಿಕಾ (19) ಸಾವಿಗೆ ಶರಣಾದ ಯುವತಿಯರು.
ಬಾಲ್ಯದಿಂದಲೂ ಒಟ್ಟಿಗೆ ಬೆಳೆದ ಗಂಗಾಜಲ ಮತ್ತು ಮಲ್ಲಿಕಾ ಇಂಟರ್ ಶಿಕ್ಷಣ ಮುಗಿಸಿದ್ದಾರೆ. ವಂದನಾ ಸದ್ಯ ಇಂಟರ್ ಪ್ರಥಮ ವರ್ಷ ಓದುತ್ತಿದ್ದಾಳೆ. ಗಂಗಾಜಲ ಮತ್ತು ಮಲ್ಲಿಕಾಗೆ ಆಗಸ್ಟ್ 23 ಮತ್ತು 26ಕ್ಕೆ ಮದುವೆಯಾಗಿದ್ದು, ಗಂಡನ ಮನೆ ಸೇರಿದ್ದರು. ವಾರದ ಹಿಂದಷ್ಟೇ ಗಂಗಾಜಲ ಮತ್ತು ಮಲ್ಲಿಕಾ ತವರು ಮನೆಗೆ ಆಗಮಿಸಿದ್ದರು. ಏನಾಯ್ತೋ ಏನೋ. ಇವರು ಕಳೆದ ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ಮೂವರು ಬೇರೆ ಬೇರೆ ಕಾರಣಗಳಿಂದ ಮನೆಯಿಂದ ಹೊರ ಹೋಗಿದ್ದಾರೆ. ಪ್ರೀತಿಯಿಂದ ಸಾಕಿದ ಮನೆಯ ಮಕ್ಕಳು ಸಂಜೆಯಾದರೂ ಮನೆಗೆ ಬಾರದೆ, ಕುಟುಂಬಸ್ಥರು ಕಂಗಾಲಾಗಿದ್ದರು.
ಹೀಗೆ ಬಹಳ ಸಮಯ ಕಳೆದ್ರೂ ಮೂವರು ಮನೆಗೆ ಬರಲೇ ಇಲ್ಲ. ಸ್ನೇಹಿತರು, ಬಂಧು-ಬಳಗ ಹೀಗೆ ಸಾಕಷ್ಟು ಕಡೆಗಳಲ್ಲಿ ಪೋಷಕರು ಹುಡುಕಾಡಿದ್ದಾರೆ. ಆದ್ರೂ ಹೆಣ್ಣುಮಕ್ಕಳ ಕುರುಹು ಕೂಡಾ ದೊರೆಯಲೇ ಇಲ್ಲ. ಇದೇ ಸಂದರ್ಭದಲ್ಲಿ ಆಘಾತಕಾರಿ ಸುದ್ದಿಯೊಂದು ಬರಸಿಡಿಲಂತೆ ಬಂದಪ್ಪಳಿಸಿತು. ಗುರುವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಧರ್ಮಸಮುದ್ರ ಜಲಾಶಯದಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿದ್ದ ಸುದ್ದಿ ಅದು. ಈ ಸುದ್ದಿ ತಿಳಿದ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿತ್ತು.
ಅನಾರೋಗ್ಯದ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಿವಾಹಿತ ಯುವತಿಯರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಅವರಿಬ್ಬರ ಜೊತೆ ಸೇರಿ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಂದನಾ ತಂದೆ ದೂರಿನಲ್ಲಿ ಉಲ್ಲೇಖಿಸುತ್ತಾರೆ. ಪೊಲೀಸರು ಸಾವಿಗೆ ಶರಣಾದ ಯುವತಿಯರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಮದುವೆ ಆಗಿ ಒಬ್ಬರನ್ನೊಬ್ಬರು ಬಿಟ್ಟಿರದ ಕಾರಣಕ್ಕೆ ಮೂವರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಅನ್ನೋದು ಸಂಬಂಧಿಕರ ಅನುಮಾನ. ಆದ್ರೆ ಮೂವರ ಸಾವಿಗೆ ಸ್ಪಷ್ಟವಾದ ಕಾರಣ ಇನ್ನೂ ದೊರೆತಿಲ್ಲ. ಸದ್ಯ ಪ್ರಕರಣದ ಪೊಲೀಸ್ ತನಿಖೆ ಮುಂದುವರೆದಿದೆ.