ಮೋತಿಹಾರಿ (ಬಿಹಾರ): ಇತ್ತೀಚಿಗೆ ಸುರಿಯುತ್ತಿರುವ ಮಳೆಯಿಂದಾಗಿ ಬಿಹಾರದಲ್ಲಿ ಎಲ್ಲ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಬೇಕೆಂಬ ಹಂಬಲದಲ್ಲಿ ಯುವಜನತೆ ನದಿಗಳ ದಡದಲ್ಲಿ ರೀಲ್ಸ್ ಮಾಡಲು ಹೋಗಿ ತಮ್ಮ ಪ್ರಾಣದ ಜೊತೆಯೇ ಚೆಲ್ಲಾಟವಾಡುತ್ತಿದ್ದಾರೆ. ಇಂತಹದ್ದೇ ಪ್ರಕರಣವೊಂದು ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿಯಲ್ಲಿ ಬೆಳಕಿಗೆ ಬಂದಿದ್ದು, ರೀಲ್ಸ್ ಮಾಡಲು ಹೋಗಿ ಮೂವರು ಬಾಲಕರು ನದಿ ಪಾಲಾಗಿದ್ದಾರೆ.
ಪೂರ್ವ ಚಂಪಾರಣ್ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಟಿಕುಲಿಯಾ ಗ್ರಾಮದ ಬುಧಿ ಗಂಡಕ್ ನದಿಯಲ್ಲಿ ಈ ಘಟನೆ ನಡೆದಿದೆ. ಮೂವರು ಬಾಲಕರು ರೀಲ್ಸ್ಗಳನ್ನು ಮಾಡಲೆಂದು ನದಿಗೆ ಬಂದಿದ್ದರು. ಆದರೆ, ಮಳೆಯಿಂದಾಗಿ ನದಿಯ ನೀರಿನ ಮಟ್ಟ ಹೆಚ್ಚಾಗಿ ನದಿಯಲ್ಲಿ ಮೂವರು ಸಹ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ಮಾಹಿತಿ ನೀಡಿದ್ದಾರೆ.
14 ವರ್ಷದ ಇಬ್ಬರು ಹಾಗೂ 15 ವರ್ಷದ ಬಾಲಕ ಸೇರಿ ಮೂವರು ಸ್ನೇಹಿತರು ಬುಧಿ ಗಂಡಕ್ ನದಿಯ ದಡದಲ್ಲಿ ರೀಲ್ಸ್ಗಳನ್ನು ಮಾಡಲು ಬಂದಿದ್ದರು. ಅಷ್ಟರಲ್ಲಿ ಮಳೆಯಿಂದಾಗಿ ಜಾರಿ ಓರ್ವ ಬಾಲಕ ನದಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸುವ ಸಲುವಾಗಿ ಮತ್ತಿಬ್ಬರು ಸ್ನೇಹಿತರು ಕೂಡ ನದಿಗೆ ಇಳಿದಿದ್ದಾರೆ. ಆದರೆ, ಮೂವರೂ ಸಹ ನೀರಿನಲ್ಲಿ ಮುಳುಗಿದ್ದಾರೆ. ಈ ಘಟನೆ ವಿಷಯ ತಿಳಿದು ಸ್ಥಳದಲ್ಲಿ ಜನಸಾಗರವೇ ಜಮಾಯಿಸಿತ್ತು. ಸೋಮವಾರ ಸಂಜೆ ಸ್ಥಳೀಯ ಜನರ ಸಹಾಯದಿಂದ ಎಸ್ಡಿಆರ್ಎಫ್ ಸಿಬ್ಬಂದಿ ಸುಮಾರು 10 ಗಂಟೆಗಳ ಕಾರ್ಯಾಚರಣೆ ನಡೆಸಿ ಮೂವರ ಬಾಲಕರ ಮೃತದೇಹಗಳನ್ನು ನದಿಯಿಂದ ಹೊರ ತೆಗೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಇದನ್ನೂ ಓದಿ: ರೀಲ್ಸ್ ಮಾಡುವಾಗ ದುರಂತ: ಹರಿಹರದಲ್ಲಿ ಚೆಕ್ ಡ್ಯಾಂಗೆ ಬಿದ್ದು ಸ್ನೇಹಿತರಿಬ್ಬರು ಸಾವು
ನದಿ ದಡಕ್ಕೆ ಹೋಗದಂತೆ ಮನವಿ: ಏಕಕಾಲಕ್ಕೆ ಮೂವರು ಬಾಲಕರು ಸಾವನ್ನಪ್ಪಿರುವ ಘಟನೆಯಿಂದ ಟಿಕುಲಿಯಾ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಮೂವರು ಯುವಕರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮತ್ತೊಂದೆಡೆ, ಮೋತಿಹಾರಿ ಎಸ್‌ಡಿಎಂ ಶ್ರೇಷ್ಠ ಸುಮನ್, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಆದ್ದರಿಂದ ಜನರು ನದಿಗಳಿಗೆ ಹೋಗುವುದನ್ನು ತಪ್ಪಿಸಬೇಕು ಹಾಗೂ ಮಳೆಯಲ್ಲಿ ಜಾಗರೂಕರಾಗಿರಿ ಎಂದು ಸಲಹೆ ನೀಡಿದ್ದಾರೆ.
ಬಿಹಾರದಲ್ಲಿ ಕಳೆದ 1 ವಾರದಿಂದ ಮುಂಗಾರು ಸಂಪೂರ್ಣ ಚುರುಕಾಗಿದೆ. ರಾಜ್ಯಾದ್ಯಂತ ಸಾಧಾರಣವಾಗಿ ಭಾರಿ ಮಳೆಯಾಗುತ್ತಿದೆ. ಬಿಹಾರದಲ್ಲಿ ಮಳೆ ಹಾಗೂ ನೇಪಾಳದಿಂದ ನೀರು ಬರುತ್ತಿರುವುದರಿಂದ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದೆ. ಗಂಗಾ, ಗಂಡಕ್, ಬುಧಿ ಗಂಡಕ್, ಕೋಸಿ ಮತ್ತು ಬಾಗ್ಮತಿ ನದಿಗಳು ಉಕ್ಕಿ ಹರಿಯುತ್ತಿವೆ. ಆದ್ದರಿಂದ ಹವಾಮಾನ ಇಲಾಖೆ ಕೂಡ ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದೆ. ನದಿಗಳ ಸಮೀಪ ಹೋಗುವುದನ್ನು ತಪ್ಪಿಸಿ. ಅಲ್ಲದೇ, ಕರಾವಳಿ ಭಾಗದ ಜನರು ವಿಶೇಷ ಮುಂಜಾಗ್ರತೆ ವಹಿಸಬೇಕೆಂದು ಹೇಳಿದೆ.
ಇದನ್ನೂ ಓದಿ: Hassan crime: ಕೈಯಲ್ಲಿ ನಕಲಿ ಗನ್ ಹಿಡಿದು ರೋಡ್ನಲ್ಲಿ ರೀಲ್ಸ್.. ಸಂಚಾರ ನಿಯಮ ಉಲ್ಲಂಘನೆಯಡಿ ಇಬ್ಬರು ಪೊಲೀಸ್ ವಶಕ್ಕೆ