ಧನ್ಬಾದ್ (ಜಾರ್ಖಂಡ್): ಕಲ್ಲಿದ್ದಲು ಗಣಿಗಾರಿಕೆ ವೇಳೆ ಗಣಿ ಕುಸಿದು ಓರ್ವ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಜಾರ್ಖಂಡ್ನ ಧನ್ಬಾದ್ ಜಿಲ್ಲೆಯಲ್ಲಿ ಇಂದು ನಡೆದಿದೆ. ಇಲ್ಲಿನ ಭೌರಾ ಒಪಿ ಪ್ರದೇಶದ ಸಂ.12ರ ಗಣಿಯಲ್ಲಿ ಅಕ್ರಮ ಗಣಿಕಾರಿಕೆ ವೇಳೆ ದುರಂತ ಜರುಗಿದೆ ಎಂದು ಹೇಳಲಾಗುತ್ತಿದೆ.
ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ (ಬಿಸಿಸಿಎಲ್)ನ ಭೌರಾ ಕಾಲೇರಿ ಪ್ರದೇಶದಲ್ಲಿ ಕಲ್ಲಿದ್ದಲು ಅಗೆಯಲೆಂದು ಬೆಳಗ್ಗೆ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಬಂದಿದ್ದರು. ಇದರ ನಡುವೆ ಗಣಿಯ ಶಾಫ್ಟ್ನ ಭಾರಿ ಸದ್ದಿನೊಂದಿಗೆ ಗಣಿ ಕುಸಿದು ಬಿದ್ದಿದೆ. ಇದರಿಂದ ಗಡಿ ಅಗೆಯುತ್ತಿದ್ದ ಕಾರ್ಮಿಕರು ತಮ್ಮನ್ನು ರಕ್ಷಿಸಿಕೊಳ್ಳಲು ಹೊರಗೆ ಓಡಲಾರಂಭಿಸಿದರು. ಆದರೆ, ಈ ವೇಳೆ ಅವಶೇಷಗಳಡಿ ಹಲವರು ಸಿಲುಕಿದ್ದರು. ಇದರಲ್ಲಿ ಐವರನ್ನು ಹೊರತೆಗೆಯಲಾಗಿದೆ. ಈ ಪೈಕಿ ಮೂವರು ಮೃತಪಟ್ಟಿದ್ದಾರೆ. ಉಳಿದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಳ್ಳತನ ಮಾಡಲು ಗಣಿಗೆ ಇಳಿದ ನಾಲ್ವರು: ಉಸಿರುಗಟ್ಟಿ ಸಾವು
ವಿಷಯ ತಿಳಿದು ಪೊಲೀಸರು ಸಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೇ, ಜೆಸಿಬಿ ಮೂಲಕ ರಕ್ಷಣಾ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಮೇಲ್ನೋಟಕ್ಕೆ ಅಕ್ರಮ ಗಣಿಗಾರಿಕೆ ವೇಳೆ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದ ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಅಭಿಷೇಕ್ ಕುಮಾರ್ ಮಾತನಾಡಿ, ಸದ್ಯ ರಕ್ಷಣಾ ಕಾರ್ಯಾಚರಣೆ ಜರುಗುತ್ತಿದೆ. ಇದರ ಕಾರ್ಯ ಮುಗಿದ ಬಳಿಕ ಮೃತರು ಮತ್ತು ಗಣಿಯಲ್ಲಿ ಸಿಕ್ಕಿಬಿದ್ದ ಹಾಗೂ ಗಾಯಗೊಂಡವರ ನಿಖರವಾದ ಸಂಖ್ಯೆ ತಿಳಿಯಲಿದೆ ಎಂದು ಹೇಳಿದ್ದಾರೆ.
ಮೃತದೇಹವಿಟ್ಟು ಪ್ರತಿಭಟನೆ: ಮತ್ತೊಂದೆಡೆ, ಮೃತ ಮೂವರು ಪೈಕಿ ಅಪ್ರಾಪ್ತ ವಯಸ್ಕನೂ ಸೇರಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅಪ್ರಾಪ್ತನ ಮೃತದೇಹವನ್ನು ಪೂರ್ವ ಜಾರಿಯಾ ಜನರಲ್ ಮ್ಯಾನೇಜರ್ ಕಚೇರಿ ಮುಂದೆ ಇಟ್ಟು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಅಧಿಕಾರಿಗಳು ವಿರುದ್ಧ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣದ ಆಮಿಷದ ತೋರಿ ನನ್ನ ಮಗನನ್ನು ಗಣಿಗಾರಿಕೆಯಲ್ಲಿ ಕೆಲಸ ಮಾಡುವಂತೆ ಬಲವಂತ ಮಾಡಲಾಗುತ್ತಿತ್ತು. ಗಣಿಗಾರಿಕೆಗೆ ನಿರಾಕರಿಸಿದರೂ ಹಲವು ಬಾರಿ ಮಗನಿಗೆ ಫೋನ್ಗೆ ಕರೆ ಮಾಡುತ್ತಿದ್ದರು ಎಂದು ಮೃತನ ತಾಯಿ ಕಣ್ಣೀರು ಹಾಕಿದ್ದಾರೆ.
ಸ್ಥಳೀಯರಾದ ವಿನೋದ್ ಕುಮಾರ್ ಹಾಗೂ ಸುಬೋಧ್ ಕುಮಾರ್ ಮಾತನಾಡಿ, ಅಕ್ರಮ ಗಣಿಗಾರಿಕೆ ತಡೆಯುವಂತೆ ಡಿಜಿಎಂಎಸ್‌ಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಶುಕ್ರವಾರ ನಡೆದ ಈ ದುರಂತಕ್ಕೆ ಡಿಜಿಎಂಎಸ್ ಮತ್ತು ಬಿಸಿಸಿಎಲ್‌ನ ಅಧಿಕಾರಿಗಳೇ ಜವಾಬ್ದಾರರು. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕಲ್ಲು ಕ್ವಾರಿಯಲ್ಲಿ ಕಾರ್ಮಿಕ ಸಾವು ಪ್ರಕರಣ: ಕ್ವಾರಿ ಮಾಲೀಕ ಸೇರಿ 7 ಮಂದಿ ಬಂಧನ