ಗುವಾಹಟಿ: ಅಸ್ಸೋಂನಲ್ಲಿ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ತೈಲ ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಅಧಿಕಾರಿಗಳನ್ನು ಮಂಗಳವಾರ ರಾತ್ರಿ ಅಪರಿಚಿತ ಬಂದೂಕುಧಾರಿಗಳು ಲಖ್ವಾ ಎಂಬಲ್ಲಿ ಅಪಹರಿಸಿದ್ದಾರೆ.
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಮೋಹಿನಿ ಮೋಹನ್ ಗೊಗೊಯ್, ರಿತುಲ್ ಸೈಕಿಯಾ ಮತ್ತು ಜೂನಿಯರ್ ಎಂಜಿನಿಯರಿಂಗ್ ಸಹಾಯಕ ಅಲಕೇಶ್ ಸೈಕಿಯಾ ಅಪಹರಣಗೊಂಡವರು ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗಿನ ಜಾವ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತನ್ನ ಸಿಬ್ಬಂದಿಗಳ ಅಪಹರಣದ ಕುರಿತು ಒಎನ್‌ಜಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಅಪಹರಣಕ್ಕೊಳಗಾದ ನೌಕರರನ್ನು ಒಎನ್‌ಜಿಸಿಗೆ ಸೇರಿದ ಕಾರ್ಯಾಚರಣಾ ವಾಹನದಲ್ಲಿಯೇ ದುಷ್ಕರ್ಮಿಗಳು ಕರೆದೊಯ್ದಿದ್ದಾರೆ. ನಂತರ, ಅಸ್ಸಾಂ-ನಾಗಾಲ್ಯಾಂಡ್ ಗಡಿಯ ಸಮೀಪವಿರುವ ನಿಮೋನಗಢ ಅರಣ್ಯದ ಬಳಿ ವಾಹನವನ್ನು ಬಿಟ್ಟು ಸಿಬ್ಬಂದಿ ಜೊತೆ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದೆ.
ಹಿಂದೆಯೂ ನಡೆದಿತ್ತು ಅಧಿಕಾರಿಗಳ ಪ್ರಕರಣ
ಕಳೆದ ವರ್ಷ ಡಿಸೆಂಬರ್ 21 ರಂದು QUIPPO ಯ ಇಬ್ಬರು ಅಧಿಕಾರಿಗಳಾದ ಪ್ರಣಬ್ ಕುಮಾರ್ ಗೊಗೊಯ್ ಮತ್ತು ರಾಮ್ ಕುಮಾರ್ ಅವರನ್ನು ಅರುಣಾಚಲದಿಂದ ಉಲ್ಫಾ (ಐ) ಉಗ್ರರು ಅಪಹರಿಸಿದ್ದರು. ಉಲ್ಫಾ (ಐ) ಪ್ರಣಬ್ ಕುಮಾರ್ ಗೊಗೊಯ್ ಅವರನ್ನು ಮೂರು ತಿಂಗಳು 14 ದಿನಗಳ ನಂತರ ಮತ್ತು ರಾಮ್ ಕುಮಾರ್ ಅವರನ್ನು ಮೂರು ತಿಂಗಳು 16 ದಿನಗಳ ನಂತರ ಬಿಡುಗಡೆ ಮಾಡಿತ್ತು.
ಆದರೆ, ಈ ಮೂವರು ಒಎನ್‌ಜಿಸಿ ನೌಕರರನ್ನು ಏಕೆ ಮತ್ತು ಯಾರು ಅಪಹರಿಸಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಈ ಬಗ್ಗೆ ಯಾವುದೇ ನಿಷೇಧಿತ ಸಂಘಟನೆಗಳು ಈವರೆಗೆ ಹೇಳಿಕೆ ನೀಡಿಲ್ಲ.