ಚೆನ್ನೈ (ತಮಿಳುನಾಡು): ಎಲೆಕ್ಟ್ರಿಕ್ ಸೊಳ್ಳೆ ನಿವಾರಕ ರಿಪಲೆಂಟ್ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಉಸಿರುಗಟ್ಟಿ ಓರ್ವ ವೃದ್ಧೆ ಹಾಗೂ ಮೂವರು ಬಾಲಕಿಯರು ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ತಮಿಳುನಾಡು ರಾಜಧಾನಿ ಚೆನ್ನೈಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಗಾಢ ನಿದ್ದೆಯಲ್ಲಿದ್ದ ಅಜ್ಜಿ ಮತ್ತು ಮೊಮ್ಮಕ್ಕಳು ಮಲಗಿದ್ದಲ್ಲೇ ಉಸಿರು ಚೆಲ್ಲಿದ್ದಾರೆ.
ಇಲ್ಲಿನ ಮಾಥೂರ್ ಪ್ರದೇಶದಲ್ಲಿ ಈ ದುರಂತ ನಡೆದಿದೆ. ಮೃತರನ್ನು ಸಂತಾನ ಲಕ್ಷ್ಮಿ (67), ಸಂಧಿಯಾ (10), ಪ್ರಿಯಾ ಲಕ್ಷ್ಮಿ (8), ಪವಿತ್ರಾ (7) ಎಂದು ಗುರುತಿಸಲಾಗಿದೆ. ಮನೆಯಲ್ಲಿ ನಾಲ್ವರು ಒಟ್ಟಿಗೆ ಮಲಗಿದ್ದರು. ಆದರೆ, ಮಧ್ಯರಾತ್ರಿ ಎಲೆಕ್ಟ್ರಿಕ್ ಸೊಳ್ಳೆ ನಿವಾರಕ ರಿಪಲೆಂಟ್ಗೆ ಏಕಾಏಕಿ ಬೆಂಕಿ ತಗುಲಿದೆ. ಇದರಿಂದ ಕೆಳಗಿದ್ದ ರಟ್ಟಿನ ಪೆಟ್ಟಿಗೆ ಬೆಂಕಿ ತಾಗಿ ನಂತರ ಇಡೀ ಮನೆ ತುಂಬಾ ದಟ್ಟ ಹೊಗೆ ಆವರಿಸಿದೆ. ಹೀಗಾಗಿ ಉಸಿರುಗಟ್ಟಿ ನಾಲ್ವರೂ ಸಹ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣದ ವಿವರ: ಮೃತ ಸಂಧಿಯಾ ಹಾಗೂ ಪ್ರಿಯಾ ಲಕ್ಷ್ಮಿ ಇಬ್ಬರೂ ಉದಯರ್ ಹಾಗೂ ಸೆಲ್ವಿ ದಂಪತಿಯ ಪುತ್ರಿಯರಾಗಿದ್ದಾರೆ. ಖಾಸಗಿ ಆಹಾರ ವಿತರಣಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದಯರ್ ಅವರ ಬೈಕ್ 10 ದಿನಗಳ ಹಿಂದೆ ಅಪಘಾತಕ್ಕೀಡಾಗಿತ್ತು. ಹೀಗಾಗಿ ಕೆಎಂಸಿ ಆಸ್ಪತ್ರೆಗೆ ಉದಯರ್ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತ್ನಿ ಸೆಲ್ವಿ ಆಸ್ಪತ್ರೆಯಲ್ಲಿಯೇ ಇದ್ದು ಪತಿಯನ್ನು ನೋಡಿಕೊಳ್ಳುತ್ತಿದ್ದಾರೆ.
ಆದ್ದರಿಂದ ಈ ದಂಪತಿಯ ಮಕ್ಕಳಾದ ಸಂಧಿಯಾ ಮತ್ತು ಪ್ರಿಯಾ ತಮ್ಮ ಅಜ್ಜಿ ಸಂತಾನ ಲಕ್ಷ್ಮಿ ಅವರೊಂದಿಗೆ ಮನೆಯಲ್ಲಿದ್ದರು. ಶುಕ್ರವಾರ ಮನೆಯಲ್ಲಿ ಅಜ್ಜಿ, ಈ ಇಬ್ಬರು ಮಕ್ಕಳೊಂದಿಗೆ ಸೆಲ್ವಿ ಅವರ ಸಹೋದರಿ ವೇಲಮ್ಮಳ್ ಪುತ್ರಿಯಾದ ಪವಿತ್ರಾಳನ್ನು ಕರೆದುಕೊಂಡು ಮಲಗಿದ್ದರು. ಎದುರುಗಡೆಯ ಮನೆಯಲ್ಲೇ ಪವಿತ್ರಾ ಪೋಷಕರು ವಾಸವಾಗಿದ್ದಾರೆ. ಶನಿವಾರ ಬೆಳಗ್ಗೆ ತುಂಬಾ ಹೊತ್ತಾದರೂ ಪವಿತ್ರಾ ಮನೆಗೆ ಬಾರದ ಹಿನ್ನೆಲೆಯಲ್ಲಿ ಪವಿತ್ರಾಳ ತಾಯಿ ವೇಲಮ್ಮಳ್ ಮನೆಯ ಬಾಗಿಲು ತಟ್ಟಿದ್ದಾರೆ. ಆಗ ಮನೆಯ ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಅನುಮಾನಗೊಂಡ ವೇಲಮ್ಮಳ್ ಕಿಟಕಿಯಿಂದ ನೋಡಿದಾಗ ಎಲ್ಲರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ.
ಇದರಿಂದ ಆಕೆಯ ಕಿರುಚಾಟ ಕೇಳಿದ ಅಕ್ಕ-ಪಕ್ಕದವರು ಬಂದು ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಆಗ ಅಜ್ಜಿ ಹಾಗೂ ಮೂವರು ಮಕ್ಕಳು ಮೃತಪಟ್ಟಿರುವುದು ಪತ್ತೆಯಾಗಿದೆ. ನಂತರ ಈ ಘಟನೆ ಕುರಿತು ಮಾಹಿತಿ ಪಡೆದ ಮಾಧವರಂ ಡೈರಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎಲ್ಲರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚೆನ್ನೈನ ಸ್ಟಾನ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ವಿದ್ಯುತ್ ಸೊಳ್ಳೆ ನಿವಾರಕ ರಿಪಲೆಂಟ್ಗೆ ಬೆಂಕಿ ತಗುಲಿ ಮನೆಯಲ್ಲಿ ವ್ಯಾಪಿಸಿದ ಹೊಗೆಯಿಂದ ಉಸಿರುಗಟ್ಟಿ ನಾಲ್ವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸೊಳ್ಳೆ ನಿವಾರಕ ದ್ರಾವಣ ಸೇವಿಸಿದ ಒಂದೂವರೆ ವರ್ಷದ ಬಾಲಕಿ ಸಾವು.. ಪೋಷಕರ ಆಕ್ರಂದನ