ರಿಷಿಕೇಶ: ಉತ್ತರಾಖಂಡದ ರಿಷಿಕೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಐವರು ದುಷ್ಕರ್ಮಿಗಳು ಅಸ್ಸೋಂನ ಮೂವರು ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅರುಪ್, ಲಿಂಡಾ ಮತ್ತು ರಿಚರ್ಡ್ ಹಲ್ಲೆಗೊಳಗಾದ ಯುವಕರು. ಕೆಲಸ ಕೊಡಿಸುವುದಾಗಿ ದುಷ್ಕರ್ಮಿಗಳು ಫೋನ್ ಕರೆ ಮಾಡಿದ್ದಾರೆ. ಆ ಕೆಲಸವನ್ನು ಯುವಕರು ಒಪ್ಪದಿದ್ದಾಗ, ಅವರನ್ನು ಸುಮಾರು ಮೂರು ವಾರಗಳ ಕಾಲ ಒತ್ತೆಯಾಳಾಗಿ ಇರಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಇದೀಗ ಯುವಕರು ತಪ್ಪಿಸಿಕೊಂಡಿದ್ದು, ಅಪರಾಧಿಗಳು ತಲೆಮರೆಸಿಕೊಂಡಿದ್ದಾರೆ.
ಸಂತ್ರಸ್ತರಲ್ಲಿ ಒಬ್ಬರಾದ ಅರುಪ್ ಕುಮಾರ್ (28) ಮಕೇಶ್ವರ ಬ್ಲಾಕ್‌ನ ಕುನೌನ್ ಗ್ರಾಮದಲ್ಲಿ ಉದ್ಯೋಗ ಕೊಡಿಸುವಂತೆ ದುಷ್ಕರ್ಮಿಗಳ ಮುಂದೆ ಪ್ರಸ್ತಾಪ ಮಾಡಿದ್ದರು. ಅಲ್ಲದೇ ಅವರು ಆ ಗ್ರಾಮಕ್ಕೆ ತಲುಪಿ ತಕ್ಷಣ ಕೆಲಸ ಪ್ರಾರಂಭಿಸುವಂತೆ ಹೇಳಿದ್ದರು. ಮೂವರು ಅಲ್ಲಿಗೆ ತಲುಪಿದಾಗ, ಅವರ ಬಳಿ ಹಣ ಕೇಳಿದ್ದಾರೆ. ಹಣ ಕೊಡಲು ಮೂವರು ನಿರಾಕರಿಸಿದಾಗ, ಐವರು ವ್ಯಕ್ತಿಗಳು ಬಲವಂತವಾಗಿ ಮೂವರನ್ನು ಕೊಠಡಿಯಲ್ಲಿ ಇರಿಸಿದ್ದಾರೆ.
ಇದನ್ನೂ ಓದಿ: ಶಿಶು, ಮಕ್ಕಳು, ಮಹಿಳೆಯರು ಸೇರಿದಂತೆ 100ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ರಕ್ಷಿಸಿದ ಪೊಲೀಸರು
ಸುಮಾರು ಮೂರು ವಾರಗಳ ಕಾಲ ಅವರನ್ನು ಒತ್ತೆಯಾಳಾಗಿ ಇರಿಸಲಾಗಿತ್ತು. ಯುವಕರ ಬಳಿಯಿದ್ದ ಮೊಬೈಲ್ ಫೋನ್‌ಗಳನ್ನು ಸಹ ದುಷ್ಕರ್ಮಿಗಳು ಕಸಿದುಕೊಂಡಿದ್ದರು ಎನ್ನಲಾಗ್ತಿದೆ. ಬುಧವಾರ ಬೆಳಗ್ಗೆ ಮೂವರು ಬೀಗ ಹಾಕಿದ್ದ ಕೊಠಡಿಯಿಂದ ಪರಾರಿಯಾಗಿದ್ದಾರೆ. ಬಳಿಕ ದುಷ್ಕರ್ಮಿಗಳು ಯುವಕರನ್ನು ಅಟ್ಟಿಸಿಕೊಂಡು ಬಂದಿದ್ದಾರೆ. ಆದರೆ, ಅಲ್ಲಿನ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆ ಅವರ ಬಂದ ತಕ್ಷಣ ಆರೋಪಿಗಳು ಪರಾರಿಯಾಗಿದ್ದಾರೆ.
ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಕರಣ ಇನ್ನೂ ದಾಖಲಾಗಿಲ್ಲ ಎಂದು ಎಸ್ಪಿ ಶೇಖರ್ ಸುಯಲ್ ತಿಳಿಸಿದ್ದಾರೆ. ಈ ಐವರಲ್ಲಿ ನಾಲ್ವರು ಪುರುಷರು ಮತ್ತು ಓರ್ವ ಮಹಿಳೆ ಎಂದು ಸಂತ್ರಸ್ತರು ಹೇಳಿದ್ದಾರೆ.