ಚೆನ್ನೈ (ತಮಿಳುನಾಡು): ಎಲೆಕ್ಟ್ರಿಕ್ ರೈಲು ಡಿಕ್ಕಿಯಾಗಿ ಕರ್ನಾಟಕದ ಮೂವರು ವಿಶೇಷಚೇತನ ಬಾಲಕರು ಸ್ಥಳದಲ್ಲೇ ಮೃತಪಟ್ಟ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಇಂದು (ಮಂಗಳವಾರ) ಮಧ್ಯಾಹ್ನ ನಡೆದಿದೆ. ಅಜ್ಜ, ಅಜ್ಜಿಯೊಂದಿಗೆ ವಾಸವಾಗಿದ್ದ ಈ ಮಕ್ಕಳು ರಜೆ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ನೆಲೆಸಿರುವ ಪೋಷಕರ ಬಳಿಗೆ ತೆರಳುತ್ತಿದ್ದಾಗ ದುರಂತ ಜರುಗಿದೆ.
ಮೃತರನ್ನು 10 ವರ್ಷದ ರವಿ, 11 ವರ್ಷದ ಮಂಜುನಾಥ್ ಹಾಗೂ 15 ವರ್ಷದ ಸುರೇಶ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸಹೋದರರು. ಈ ಪೈಕಿ ಇಬ್ಬರು ಕಿವುಡ ಮತ್ತು ಮೂಗರಾಗಿದ್ದರು. ಮತ್ತೊಬ್ಬರಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿದುಬಂದಿದೆ.
ಮಧ್ಯಾಹ್ನ ಮೂವರು ಕೂಡ ಉರಪಕ್ಕಂ ಸಮೀಪದ ರೈಲ್ವೆ ಹಳಿ ಪಕ್ಕದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಚೆನ್ನೈ ಬೀಜ್ ರೈಲ್ವೆ ನಿಲ್ದಾಣದಿಂದ ಚೆಂಗಲ್ಪಟ್ಟು ಕಡೆ ಸಂಚರಿಸುತ್ತಿದ್ದ ಎಲೆಕ್ಟ್ರಿಕ್ ರೈಲು ಗುದ್ದಿದೆ. ಮೃತದೇಹಗಳು ಛಿದ್ರವಾಗಿವೆ.
ತಾಂಬರಂ ಠಾಣೆ ರೈಲ್ವೆ ಪೊಲೀಸರು, ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ಕೈಗೊಂಡಿದ್ದಾರೆ.
ರಜೆ ಕಳೆಯಲು ಬಂದಿದ್ದ ಮಕ್ಕಳು: ಕರ್ನಾಟಕದದ ಸಂಜಂ ಪನ್ನನ್ ಹಾಗೂ ಈತನ ಸಹೋದರ ಹನುಮಂತಪ್ಪ ಕಳೆದ ಎರಡು ದಶಕಗಳಿಂದ ತಮಿಳುನಾಡಿನಲ್ಲಿ ನೆಲೆಸಿದ್ದಾರೆ. ವಂಡಲೂರು ಬಳಿಯ ಚೆಲ್ಲಿಯಮ್ಮನ್ ಕೋವಿಲ್ ಸ್ಟ್ರೀಟ್ ಪ್ರದೇಶದಲ್ಲಿ ವಾಸಗಿರುವ ಕುಟುಂಬಗಳು ಚೆನ್ನೈನ ಉಪನಗರಗಳಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿವೆ. ಇವರ ಮಕ್ಕಳು ಕರ್ನಾಟಕದಲ್ಲಿ ತಮ್ಮ ಅಜ್ಜ, ಅಜ್ಜಿಯ ಬಳಿಯೇ ಇದ್ದುಕೊಂಡು ಶಾಲೆಗೆ ಹೋಗುತ್ತಿದ್ದರು. ಸದ್ಯ ರಜೆ ಹಿನ್ನೆಲೆಯಲ್ಲಿ ಪೋಷಕರ ಬಳಿಗೆ ಬಂದಿದ್ದರು.
ಇದನ್ನೂ ಓದಿ: ಚೆನ್ನೈನ ಅವಡಿ ಬಳಿ ಹಳಿ ತಪ್ಪಿದ ವಿದ್ಯುತ್ ಚಾಲಿತ ರೈಲು: ತಪ್ಪಿದ ಭಾರಿ ದುರಂತ
ಚೆನ್ನೈ ಬಳಿ ಹಳ್ಳಿ ತಪ್ಪಿದ ರೈಲು: ಪ್ರತ್ಯೇಕ ಘಟನೆಯಲ್ಲಿ ಇಂದು ಬೆಳಗ್ಗೆ ಚೆನ್ನೈ ಅವಡಿ ರೈಲು ನಿಲ್ದಾಣದ ಬಳಿ ಎಲೆಕ್ಟ್ರಿಕ್ ರೈಲಿನ ಮೂರು ಬೋಗಿಗಳು ಹಳಿ ತಪ್ಪಿರುವ ಬಗ್ಗೆ ವರದಿಯಾಗಿದೆ. ಯಾವುದೇ ಪ್ರಯಾಣಿಕರಿಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ. ಹಳಿ ಬಿರುಕು ಬಿಟ್ಟಿದ್ದರಿಂದ ಸಿಗ್ನಲ್ ವಿಫಲವಾಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.