ನವದೆಹಲಿ: ಉತ್ತರಾಖಂಡ್ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರು ಮಹಿಳೆಯರು ಹರಿದ ಜೀನ್ಸ್ ಧರಿಸಬೇಡಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದಕ್ಕೆ ರಾಜ್ಯಸಭಾ ಸದಸ್ಯೆ ಜಯ ಬಚ್ಚನ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರತ್ ಸಿಂಗ್ ಅವರು ಹೀಗೆ ಮಾತನಾಡುವುದು ಸೂಕ್ತವಲ್ಲ. ಉನ್ನತ ಹುದ್ದೆಯಲ್ಲಿರುವವರು ಸಾರ್ವಜನಿಕ ಹೇಳಿಕೆಗಳನ್ನು ನೀಡುವ ಮೊದಲು ಯೋಚನೆ ಮಾಡಬೇಕು. ಇದು ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ಪ್ರೋತ್ಸಾಹಿಸುವ ಕೆಟ್ಟ ಮನಸ್ಥಿತಿ ಎಂದು ಜಯ ಬಚ್ಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡೆಹ್ರಾಡೂನ್‌ನಲ್ಲಿ ಉತ್ತರಾಖಂಡ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಕಾರ್ಯಾಗಾರವನ್ನು ಆಯೋಜಿಸಿದ್ದು, ಈ ವೇಳೆ ಮಾತನಾಡಿದ್ದ ರಾವತ್, ಇತ್ತೀಚೆಗೆ ನಾನು ಜೈಪುರದಿಂದ ಹಿಂದಿರುಗುತ್ತಿದ್ದಾಗ ನನ್ನ ಪಕ್ಕದಲ್ಲಿ ಒಬ್ಬ ಮಹಿಳೆ ಕುಳಿತಿದ್ದನ್ನು ನಾನು ಗಮನಿಸಿದೆ. ಮೊಣಕಾಲಿನ ಭಾಗದಲ್ಲಿ ಹರಿದ ಜೀನ್ಸ್ ಧರಿಸಿದ್ದಳು. ನೀವು ಯಾವ ರೀತಿಯ ಮೌಲ್ಯಗಳನ್ನು ಮಕ್ಕಳಿಗೆ ಹೇಳಿಕೊಡುತ್ತೀರಿ ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ವಿರುದ್ಧ ಇದೀಗ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ.