ಬೆಂಗಳೂರು: 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಸಜ್ಜಾಗುತ್ತಿದೆ. ಇಂಡಿಯಾ (I.N.D.I.A) ಮೈತ್ರಿಕೂಟವನ್ನು ಎದುರಿಸಲು ಸಮರ್ಥವಾಗಿ ರೆಡಿಯಾಗುತ್ತಿರುವ ಬಿಜೆಪಿ, ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಎದುರು ಘಟಾನುಘಟಿ ಅಭ್ಯರ್ಥಿಯನ್ನು ಕಣಕ್ಕಿಸಲು ಯೋಜನೆ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಕೇಸರಿ ಪಕ್ಷ ತನ್ನ ಚಿತ್ತವನ್ನು ರಾಯ್ ಬರೇಲಿ ಕ್ಷೇತ್ರದತ್ತ ನೆಟ್ಟಿದೆ.
ಸೋನಿಯಾ ಮಾತ್ರವಲ್ಲದೇ, ಕಾಂಗ್ರೆಸ್ನ ಭದ್ರಕೋಟೆಯೆಂದೇ ಪರಿಗಣಿಸಲಾಗುತ್ತಿರುವ ದೇಶದ ಪ್ರಮುಖ ಕ್ಷೇತ್ರಗಳಲ್ಲೂ ಶೀಘ್ರದಲ್ಲೇ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಲು ರಣತಂತ್ರದಲ್ಲಿದೆ. ರಾಯ್ ಬರೇಲಿಯಲ್ಲಿ ಅನಾಯಾಸವಾಗಿ ಗೆಲುವು ದಾಖಲಿಸುತ್ತಿರುವ ಸೋನಿಯಾ ವಿರುದ್ಧ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ಅಥವಾ ಎನ್ಸಿಪಿ ಪಕ್ಷದ ಸುಪ್ರಿಯಾ ಸುಳೆ ನಿಲ್ಲುವ ಸಾಧ್ಯತೆ ಗೋಚರಿಸಿದೆ.
ಸೋನಿಯಾ ಸದ್ಯ ರಾಯ್ ಬರೇಲಿ ಕ್ಷೇತ್ರ ಪ್ರತಿನಿಧಿಸುತ್ತಿದ್ದರೆ, ಡಿಂಪಲ್ ಯಾದವ್ ಮೈನಾಪುರಿ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ ಮಹರಾಷ್ಟ್ರದ ಬಾರಾಮತಿ ಕ್ಷೇತ್ರದ ಸಂಸದೆ. ಈ ಎಲ್ಲಾ ಕ್ಷೇತ್ರಗಳೂ ಈ ನಾಯಕಿಯರ ಪಕ್ಷಗಳ ಭದ್ರಕೋಟೆಯೇ ಆಗಿದೆ.
ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ಪಕ್ಷವು ಶೀಘ್ರದಲ್ಲೇ ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ. ಕಾಂಗ್ರೆಸ್ ಪ್ರಬಲವಾಗಿರುವ ಇತರೆ 160 ಲೋಕಸಭಾ ಕ್ಷೇತ್ರಗಳ ಮೇಲೂ ಬಿಜೆಪಿ ಕಣ್ಣಿಟ್ಟಿದೆ. ಕಾಂಗ್ರೆಸ್ ಕ್ಷೇತ್ರಗಳನ್ನು ವಶಪಡಿಸಿಕೊಳ್ಳಲು ಘಟನಾಘಟಿ ನಾಯಕರನ್ನೇ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದೆ. 160 ಕ್ಷೇತ್ರಗಳಲ್ಲಿ 2019ರ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದ್ದು, ಇವುಗಳನ್ನು ತನ್ನ ತೆಕ್ಕೆಗೆ ಪಡೆಯಲು ಶತಾಯಗತಾಯ ಹೋರಾಟಕ್ಕಿಳಿದಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಕಳೆದ ತಿಂಗಳು ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆಸಿದ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ, 160 ಕ್ಷೇತ್ರಗಳ ಕುರಿತು ಚರ್ಚೆ ನಡೆದಿದೆ. ದಶಕಗಳಿಂದ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ, ಮೂರನೇ ಬಾರಿಗೆ ಮತ್ತೆ ಗೆದ್ದು ಗದ್ದುಗೆ ಉಳಿಸಿಕೊಳ್ಳವ ವಿಶ್ವಾಸದಲ್ಲಿದೆ. ಇದಕ್ಕೆ ಪ್ರತಿಯಾಗಿ ಇನ್ನೊಂದೆಡೆ, ಕಾಂಗ್ರೆಸ್ ಸೇರಿದಂತೆ ಇತರೆ ಪ್ರತಿಪಕ್ಷಗಳು 'ಇಂಡಿಯಾ' ಮೈತ್ರಿಕೂಟ ರಚಿಸಿದ್ದು, ಬಿಜೆಪಿಯನ್ನು ಮಣಿಸುವ ಲೆಕ್ಕಾಚಾರದಲ್ಲಿವೆ. (ಐಎಎನ್‌ಎಸ್)
ಇದನ್ನೂ ಓದಿ: ಒಂದು ದಿನ ಮೊದಲೇ ಮುಂಬೈಗೆ ಮಮತಾ: ಇಂಡಿಯಾ ಸಭೆಗೂ ಮುನ್ನ ಬಿಗ್ ಬಿ ಭೇಟಿ