ಬೇಗುಸರಾಯ್ (ಬಿಹಾರ): ಬಿಹಾರದ ಬೇಗುಸರಾಯ್ ಜಿಲ್ಲೆಯ ಬರೌನಿಯಲ್ಲಿ ರೈಲು ಇಂಜಿನ್ನ ಬಿಡಿ ಭಾಗಗಳನ್ನು ಖದೀಮರು ಕದ್ದು, ಅವುಗಳನ್ನು ಗುಜರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದು ಬಯಲಾಗಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮುಜಾಫರ್‌ಪುರದಲ್ಲಿ ನವೆಂಬರ್ 18ರಂದು ರೈಲ್ವೆ ಪೊಲೀಸ್ ಮತ್ತು ಇಲಾಖಾ ವಿಜಿಲೆನ್ಸ್ ತಂಡವು ಗುಜರಿ ಅಂಗಡಿಯೊಂದರ ಮೇಲೆ ದಾಳಿ ನಡೆಸಿತ್ತು. ಆಗ ಲಕ್ಷಾಂತರ ರೂಪಾಯಿ ಮೌಲ್ಯದ ತಾಮ್ರ ಮತ್ತು ಅಲ್ಯೂಮಿನಿಯಂ ಸೇರಿ ರೈಲು ಎಂಜಿನ್‌ನ ವಿವಿಧ ಭಾಗಗಳು ಪತ್ತೆಯಾಗಿವೆ. ಇದೇ ವೇಳೆ ಮೂವರು ಕಳ್ಳರೂ ಸಹ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಲ್ಲದೇ, ಈ ಖದೀಮರನ್ನು ವಿಚಾರಣೆ ನಡೆಸಿದಾಗ ಪೊಲೀಸರೇ ಬೆಚ್ಚಿಬೀಳುವ ಮಾಹಿತಿ ಹೊರ ಬಿದ್ದಿದೆ.
ಇದನ್ನೂ ಓದಿ: ಅಕ್ರಮವಾಗಿ ಸಾಗಿಸುತ್ತಿದ್ದ 77 ಕೋಟಿ ಮೌಲ್ಯದ ಬ್ರ್ಯಾಂಡೆಡ್ ಕಾಸ್ಮೆಟಿಕ್ಸ್ ಜಪ್ತಿ
ಪೊಲೀಸ್ ದಾಳಿ ವೇಳೆ ಗುಜರಿ ಅಂಗಡಿಯಲ್ಲಿ ಪತ್ತೆಯಾದ ವಿವಿಧ ಭಾಗಗಳ ಮೌಲ್ಯ 30 ಲಕ್ಷ ರೂಪಾಯಿ ಅಂದಾಜಿಸಲಾಗಿದೆ. ಅಲ್ಲದೇ, ಬಿಡಿ ಭಾಗಗಳು ಬರೌನಿ ಬಳಿಯ ಗರ್ಹರಾ ರೈಲ್ವೆ ಯಾರ್ಡ್‌ನಲ್ಲಿ ಕೆಟ್ಟ ನಿಂತಿದ್ದ ಎಂಜಿನ್ಗೆ ಸೇರಿದ್ದವು ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಇದೊಂದು ಸಂಘಟಿತ ಕಳ್ಳರ ಗ್ಯಾಂಗ್ ಆಗಿದ್ದು, ರೈಲು ಎಂಜಿನ್‌ನಲ್ಲಿ ಅಳವಡಿಸಲಾದ ತಾಮ್ರದ ತಂತಿ ಮತ್ತು ಅಲ್ಯೂಮಿನಿಯಂ ಹಾಗೂ ಇತರ ಭಾಗಗಳನ್ನು ಕದಿಯುವುದೇ ಕೆಲಸವಾಗಿತ್ತು. ಕದ್ದ ವಸ್ತುಗಳನ್ನು ಬಿಹಾರದ ವಿವಿಧ ಜಿಲ್ಲೆಗಳ ವಿವಿಧ ಸ್ಕ್ರ್ಯಾಪ್ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸುರಂಗ ನಿರ್ಮಿಸಿದ್ರಾ ಕಳ್ಳರು: ಇದೇ ವೇಳೆ ರೈಲು ಇಂಜಿನ್ ಭಾಗಗಳನ್ನು ಸಾಗಿಸಲು ರೈಲ್ವೆ ಯಾರ್ಡ್‌ನಲ್ಲಿ ಆರೋಪಿಗಳು ಸುರಂಗ ಕೊರೆದಿದ್ದರು. ಕದ್ದ ಬಿಡಿ ಭಾಗಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಈ ಸುರಂಗದ ಮೂಲಕ ಹೋಗುತ್ತಿದ್ದರು. ಜೊತೆಗೆ ರೈಲಿನ ಇಂಜಿನ್ಅನ್ನೇ ಕಳ್ಳತನ ಮಾಡಲಾಗಿದೆ ಎಂದೂ ಹೇಳಲಾಗುತ್ತಿತ್ತು. ಆದರೆ, ಈ ಆರೋಪವನ್ನು ಪೂರ್ವ ಕೇಂದ್ರ ರೈಲ್ವೆ ಅಧಿಕಾರಿಗಳು ತಳ್ಳಹಾಕಿದ್ದಾರೆ.
ಇಂಜಿನ್ ಕಳವು ವರದಿ ಸುಳ್ಳು.. ರೈಲ್ವೆ ಪೊಲೀಸರ ಸ್ಪಷ್ಟನೆ: ರೈಲ್ ಇಂಜಿನ್ ಕಳ್ಳತನದಂತಹ ಯಾವುದೇ ಘಟನೆ ನಡೆದಿಲ್ಲ. ಇದು ಸುಳ್ಳು ಸುದ್ದಿ. ಬರೌನಿ ನಿಲ್ದಾಣದ ಬಳಿ ಸ್ಪೇರ್ ರೈಲ್ ಇಂಜಿನ್ ಇರಿಸಲಾಗಿತ್ತು. ಕಳ್ಳರು ಪ್ರವೇಶಿಸಿ ಕೇಬಲ್‌ಗಳನ್ನು ಕದ್ದಿದ್ದಾರೆ. ಈ ಪ್ರಕರಣದಲ್ಲಿ ಎಂಟು ಹತ್ತು ದಿನಗಳ ಹಿಂದೆ ಕಳ್ಳರು, ಸ್ಕ್ರ್ಯಾಪ್ ಡೀಲರ್ ಜೊತೆಗೆ ಯಾರಿಂದ ಕೇಬಲ್ ಮಾರಾಟ ಮಾಡಲಾಗಿತ್ತೋ ಅವರನ್ನು ಬಂಧಿಸಲಾಗಿದೆ ಎಂದು ಸಿಪಿಆರ್ಒ, ಪೂರ್ವ ಕೇಂದ್ರ ರೈಲ್ವೆಯ ಹಾಜಿಪುರದ ಸಿಪಿಆರ್ಒ ಬೀರೇಂದ್ರ ಕುಮಾರ್ ತಿಳಿಸಿದ್ದಾರೆ.
ಅಲ್ಲದೇ, ರೈಲ್ವೆ ಯಾರ್ಡ್‌ನಲ್ಲಿ ಯಾವುದೇ ಸುರಂಗವಿಲ್ಲ. ಪ್ರದೇಶದ ಬಳಿ ಮಣ್ಣು ತೆಗೆದಿದ್ದರಿಂದ ಪಿಲ್ಲರ್ ಅಡಿಯಲ್ಲಿ ಸಣ್ಣ ದಾರಿ (ಪಿಟ್) ನಿರ್ಮಾಣವಾಗಿದೆ. ಯಾವುದೇ ಸುರಂಗವನ್ನು ನಿರ್ಮಿಸಿಲ್ಲ. ಆದರೆ, ಈಗಾಗಲೇ ಕಳ್ಳತನಕ್ಕೆ ಸಂಬಂಧಿಸಿದ ಎಲ್ಲ ಕಳ್ಳರನ್ನು ಬಂಧಿಸಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಐಜಿ ವಿಕಾಸ್ ವೈಭವ್ ಮನೆಯಲ್ಲಿ ರಿವಾಲ್ವರ್ ಕಳ್ಳತನ: ಪೊಲೀಸ್ ಇಲಾಖೆಯಲ್ಲಿ ಸಂಚಲನ