ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕಳ್ಳತನದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಕಳ್ಳರು ರೋಹಿಣಿ ಪ್ರದೇಶದ ಎಂಜಿನಿಯರ್ ಮನೆಗೆ ಕಳ್ಳತನ ಮಾಡಲು ಪ್ರವೇಶಿಸಿದ್ದರು. ಆದರೆ, ಮನೆಯಲ್ಲಿ ಬೆಲೆಬಾಳುವ ವಸ್ತುಗಳು ಸಿಗದಿದ್ದಾಗ ಕಳ್ಳರು ಹಿಂತಿರುಗುತ್ತಿದ್ದರು. ಹೊರಡುವ ಮುನ್ನ ಸಂತ್ರಸ್ತನ ಮನೆ ಬಾಗಿಲಿಗೆ 500 ರೂಪಾಯಿಯ ನೋಟು ಇಟ್ಟು ತೆರಳಿದ್ದಾರೆ. ಈ ಘಟನೆ ನಡೆದಾಗ ಎಂಜಿನಿಯರ್ ಮನೆಯಲ್ಲಿ ಇರಲಿಲ್ಲ. ಅವರು ಮನಗೆ ಹಿಂತಿರುಗಿ ನೋಡಿದಾಗ ಬೀಗ ಒಡೆದಿರುವುದು ಕಂಡು ಬಂದರೂ ಸಹ ಮನೆಯಲ್ಲಿರುವ ಒಂದೇ ಒಂದು ವಸ್ತು ಸಹ ಕಾಣೆಯಾಗಿರಲಿಲ್ಲ.
ರೋಹಿಣಿ ಪ್ರದೇಶದಲ್ಲಿ ವಾಸಿಸುತ್ತಿರುವ ನಿವೃತ್ತ ಎಂಜಿನಿಯರ್ ರಾಮಕೃಷ್ಣ ಅವರು ಜುಲೈ 19 ರಂದು ಸಂಜೆ ಗುರುಗ್ರಾಮ್‌ನಲ್ಲಿರುವ ತಮ್ಮ ಮಗನ ಮನೆಗೆ ಹೋಗಿದ್ದರು. ಅವರು ತಮ್ಮ ಜೊತೆ ಪತ್ನಿಯನ್ನು ಸಹ ಕರೆದುಕೊಂಡು ಹೋಗಿದ್ದರು. ಜುಲೈ 21 ರಂದು ಬೆಳಗ್ಗೆ ಅವರ ನೆರೆಹೊರೆಯವರು ಕರೆ ಮಾಡಿ ಮನೆ ಕಳ್ಳತನವಾಗಿದೆ ಎಂದು ತಿಳಿಸಿದರು. ಮನೆಗೆ ಹಿಂತಿರುಗಿ ನೋಡಿದಾಗ ಮನೆಯ ಮುಖ್ಯ ಬಾಗಿಲಿನ ಬೀಗ ಮುರಿದಿರುವುದು ಕಂಡು ಬಂದಿದೆ. ಮನೆಯೊಳಗೆ ಹೋಗಿ ನೋಡಿದಾಗ ಕಳ್ಳರು ಮನೆಯೊಳಗಿಂದ ಒಂದು ವಸ್ತವೂ ಸಹ ತೆಗೆದುಕೊಂಡು ಹೋಗದಿರುವುದು ಕಂಡುಬಂದಿದೆ.
ಸಂತ್ರಸ್ತ ರಾಮಕೃಷ್ಣ ಪ್ರಕರಣದ ಕುರಿತು ದೂರು ದಾಖಲಿಸಲು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಕಳ್ಳರು ಮನೆಗೆ ನುಗ್ಗಿದ್ದಾರೆ. ಆದರೆ ಏನೂ ಕಳ್ಳತನವಾಗಿಲ್ಲ ಎಂದು ಅವರು ಹೇಳಿದ್ದಾರೆ. ಮನೆಯ ಮುಖ್ಯ ಬಾಗಿಲಲ್ಲಿ 500 ರೂಪಾಯಿ ನೋಟು ಕೂಡ ಸಿಕ್ಕಿದೆ. ಮನೆಯ ವಾರ್ಡ್ ರೋಬ್ ಹಾಳು ಮಾಡಿಲ್ಲ ಎಂದು ಪೊಲೀಸರಿಗೆ ಕಳ್ಳತನದ ಮಾಹಿತಿ ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನ್ನ ಮನೆಯಲ್ಲಿ ಬೆಲೆಬಾಳುವ ವಸ್ತುಗಳಿರಲಿಲ್ಲ ಎಂದು ರಾಮಕೃಷ್ಣ ಪೊಲೀಸರಿಗೆ ತಿಳಿಸಿದ್ದಾರೆ. ಅದಕ್ಕೇ ಕಳ್ಳರು ಏನನ್ನೂ ಕದಿಯಲು ಸಾಧ್ಯವಾಗಿರಲಿಲ್ಲ. ಆದರೆ, 500 ರೂಪಾಯಿಯ ನೋಟನ್ನು ಕಳ್ಳರು ಮನೆಯಲ್ಲಿ ಬಿಟ್ಟು ಹೋಗಿದ್ದೇಕೆ ಎಂಬ ಪ್ರಶ್ನೆ ಪೊಲೀಸರಿಗೆ ಕಾಡುತ್ತಿದೆ.
ಓದಿ: ಅಂಗಡಿ ಮಾಲೀಕನಿಗೆ ವಂಚಿಸಲು ಅಡ್ಡದಾರಿ: ಕಳ್ಳ ಸಹೋದರರನ್ನು ಬಂಧಿಸಿದ ಪೊಲೀಸರು
ಲೋಡೆಡ್ ಸರ್ವಿಸ್ ರಿವಾಲ್ವಾರ್ ಕದ್ದು ಪರಾರಿ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲು ತೆರಳಿದ ವೇಳೆ ಪಿಎಸ್ಐಯಿಂದ ಲೋಡೆಡ್ ಸರ್ವಿಸ್ ರಿವಾಲ್ವಾರ್ ಕಸಿದುಕೊಂಡು ಅಂತಾರಾಜ್ಯ ಕುಖ್ಯಾತ ಕಳ್ಳನೊಬ್ಬ ಪರಾರಿಯಾದ ಘಟನೆ ಜುಲೈ 16ರ ಸಂಜೆ ಅಫಜಲಪುರದಲ್ಲಿ ನಡೆದಿತ್ತು. ಜುಲೈ 17ರಂದು ರಿವಾಲ್ವಾರ್ ಜೊತೆಗೆ ಮರವೇರಿ ಕುಳಿತಿರುವ ಬಗ್ಗೆ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಸುತ್ತುವರೆದು ಸುರಕ್ಷಿತವಾಗಿ ಮರದಿಂದ ಕೆಳಗೆ ಇಳಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಅಫಜಲಪುರ ತಾಲೂಕಿನ ಬಳ್ಳೂರಗಿ ಗ್ರಾಮದ ಖಾಜಪ್ಪ ಗಾಯಕವಾಡ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು, ಅಫಜಲಪುರ, ಕಲಬುರಗಿ ಸೇರಿದಂತೆ ವಿವಿಧೆಡೆ 20ಕ್ಕೂ ಅಧಿಕ ಕಳ್ಳತನ ಪ್ರಕರಣ ದಾಖಲಾಗಿದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಲು ಜುಲೈ 16ರಂದು ಬೆಂಗಳೂರಿನಿಂದ ಸಿಸಿಬಿ ಪೊಲೀಸರ ತಂಡ ಆಗಮಿಸಿತ್ತು.