ಕೊಚ್ಚಿ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಡುವೆ ಮೈತ್ರಿ ಏರ್ಪಟ್ಟಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಬಿಜೆಪಿ ಒಟ್ಟಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿವೆ. ತನಿಖಾ ಸಂಸ್ಥೆಗಳ ಮೂಲಕ ಬಿಜೆಪಿಯು ಯೋಜನೆಗಳನ್ನು ಸ್ಥಗಿತಗೊಳಿಸುತ್ತಿದ್ದರೆ, ಕಾಂಗ್ರೆಸ್ ಪಕ್ಷವು ಅದಕ್ಕೆ ಸಹಕಾರ ನೀಡುತ್ತಿದೆ. ಕೇರಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಈ ಹಿಂದೆಯೇ ಮೈತ್ರಿ ಇತ್ತು. ಇದು ಈ ಚುನಾವಣೆಯಲ್ಲೂ ಮುಂದುವರೆದಿದೆ ಎಂದು ಆರೋಪಿಸಿದರು.
ಕೇಂದ್ರದ ತನಿಖಾ ಸಂಸ್ಥೆಗಳು ರಾಜ್ಯದಲ್ಲಿ ವಿಧ್ವಂಸಕ ಕೆಲಸಗಳನ್ನು ಮಾಡುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದವಿದ್ದು, ನಿರಂತರ ಆರೋಪಗಳನ್ನು ಮಾಡುವ ಮೂಲಕ ಸರ್ಕಾರದ ಕಾರ್ಯಚಟುವಟಿಕೆಯನ್ನು ತಡೆಯಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಮುಖ್ಯಮಂತ್ರಿ ಕಿಡಿಕಾರಿದ್ದಾರೆ.
ಇನ್ನು 140 ಸದಸ್ಯರ ಕೇರಳ ವಿಧಾನಸಭೆಯ ಚುನಾವಣೆ ಏಪ್ರಿಲ್ 6 ರಂದು 14 ಜಿಲ್ಲೆಗಳಲ್ಲಿ ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ.