ಶಿರಡಿ(ಮಹಾರಾಷ್ಟ್ರ): ಕೊರೊನಾ ಮಹಾಮಾರಿಯಿಂದ ಮಹಾರಾಷ್ಟ್ರದಲ್ಲಿ ಸ್ಥಗಿತಗೊಂಡಿದ್ದ ದೇವಾಲಯಗಳು ಮತ್ತು ಇತರ ಧಾರ್ಮಿಕ ಪೂಜಾ ಸ್ಥಳಗಳನ್ನು ಮತ್ತೆ ತೆರೆಯಬಹುದು ಎಂದು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಹೇಳಿದೆ. ಹಾಗಾಗಿ, ಇಂದಿನಿಂದ ಶಿರಡಿಯಲ್ಲಿನ ಸಾಯಿಬಾಬಾ ದೇವಸ್ಥಾನವನ್ನು ಮತ್ತೆ ಭಕ್ತರಿಗಾಗಿ ತೆರೆಯಲಾಗ್ತಿದೆ.
ವರದಿಯ ಪ್ರಕಾರ, ಭಕ್ತರು ಸೋಮವಾರ ಕಾಕಡ್ ಆರತಿ ನಂತರ ಸಾಯಿಬಾಬಾರಿಂದ ಆಶೀರ್ವಾದ ಪಡೆಯಲು ಸಾಧ್ಯವಾಗುತ್ತದೆ. ಆದರೂ, ಕೋವಿಡ್-19 ಕಾರಣದಿಂದಾಗಿ, ಶ್ರೀ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್ ದಿನಕ್ಕೆ 6,000 ಭಕ್ತರಿಗೆ ಮತ್ತು ಗಂಟೆಗೆ 900 ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಿದೆ.
ಭಕ್ತರು 'ದರ್ಶನ'ಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಅಥವಾ ಶಿರಡಿಯಲ್ಲಿರುವ ಕೌಂಟರ್‌ನಿಂದ ಟೋಕನ್ ತೆಗೆದುಕೊಳ್ಳಬಹುದು. 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ದೇಗುಲ ಪ್ರವೇಶಕ್ಕೆ ಅನುಮತಿ ಇಲ್ಲ.
ಅಗತ್ಯ ಸಾಮಾಜಿಕ ಅಂತರದ ಜೊತೆಗೆ ಪ್ರತಿ ಭಕ್ತರಿಗೆ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ. ದೇವಾಲಯಕ್ಕೆ ಪ್ರವೇಶಿಸಿದ ಕೂಡಲೇ ಭಕ್ತರು ತಮ್ಮ ಪಾದಗಳನ್ನು ತೊಳೆದುಕೊಳ್ಳುವುದು ಕಡ್ಡಾಯವಾಗಿದೆ.