ಮುಂಬೈ: ಜಾರ್ಖಂಡ್ನ ಪವಿತ್ರ ಕ್ಷೇತ್ರವಾದ ಶ್ರೀ ಸಮ್ಮೇದ್ ಶಿಖರ್ಜಿಯನ್ನು ಪ್ರವಾಸಿತಾಣ ಮಾಡುವುದಾಗಿ ಘೋಷಣೆ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡೆಗೆ ಜೈನ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಮುಂಬೈನಲ್ಲಿ ಜೈನ ಸಮುದಾಯದ ಮಂದಿ ಬೃಹತ್ ಪ್ರತಿಭಟನೆ ನಡೆಸಿದರು. ಜಾರ್ಖಂಡ್ನ ಪ್ರಶಾಂತ್ ಹಿಲ್ನಲ್ಲಿರುವ ಈ ಸ್ಥಳವು ಜೈನರಿಗೆ ಅತ್ಯಂತ ಪವಿತ್ರವಾಗಿದೆ.
ಇದನ್ನು ಪ್ರವಾಸಿತಾಣ ಮಾಡಬೇಕು ಎಂದು ಜಾರ್ಖಂಡ ಸರ್ಕಾರ ಬಹಳ ಹಿಂದಿನಿಂದಲೂ ಯೋಜನೆ ರೂಪಿಸಿದೆ. ಇದಕ್ಕೆ ಈಗ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ಶ್ರೀ ಸಮ್ಮೇದ್ ಶಿಖರ್ಜಿಯನ್ನು ಪ್ರವಾಸೋದ್ಯಮ ತಾಣವಾಗಿ ಘೋಷಿಸುವ ಜಾರ್ಖಂಡ್ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಜೈನ ಸನ್ಯಾಸಿಯೊಬ್ಬರು ಸಾವನ್ನಪ್ಪಿದ ದಿನದ ನಂತರ, ಮುಂಬೈ ಬುಧವಾರ ಸಮುದಾಯಸ್ಥರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಉಪವಾಸ ಸತ್ಯಾಗ್ರಹದ ಎಚ್ಚರಿಕೆ: ಮುಂಬೈನ ಮೆಟ್ರೊ ನಿಲ್ದಾಣದಿಂದ ಆರಂಭವಾದ ಪ್ರತಿಭಟನೆ ಆಜಾದ್ ಮೈದಾನದಲ್ಲಿ ಮುಕ್ತಾಯವಾಯಿತು. ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖ ನಾಯಕರಯ ಭಾಗಿಯಾಗಿ ಭಾಷಣ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಜೈನರ ಪವಿತ್ರ ತಾಣವನ್ನು ಪ್ರವಾಸಿ ತಾಣ ಮಾಡುವ ಮೂಲಕ ನಮ್ಮ ಭಾವನೆಗಳಿಗೆ ಘಾಸಿಗೊಳಿಸುವ ಯತ್ನ ನಡೆಸಲಾಗಿದೆ. ಪವಿತ್ರ ಸ್ಥಳದಲ್ಲಿ ಪ್ರವಾಸೋದ್ಯಮದ ಅವಶ್ಯಕತೆ ಇಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ, ನಾವು ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ದೇಶದೆಲ್ಲೆಡೆ ಪ್ರತಿಭಟನೆ: ಜಾರ್ಖಂಡ್ ಸರ್ಕಾರ ಜೈನರ ಪವಿತ್ರ ಪ್ರದೇಶವನ್ನು ಪ್ರವಾಸೋದ್ಯಮ ಕ್ಷೇತ್ರ ಮಾಡಲು ಮುಂದಾಗಿರುವ ಕ್ರಮ ಖಂಡಿಸಿ, ದೇಶದ ಅನೇಕ ಭಾಗಗಳಲ್ಲಿ ಕಳೆದ ಮೂರು ದಿನಗಳಿಂದ ಸಮುದಾಯಸ್ಥರು ಪ್ರತಿಭಟನೆ ನಡೆಸಿದ್ದಾರೆ. ಭಾನುವಾರ ದೆಹಲಿಯ ಇಂಡಿಯಾ ಗೇಟ್ ಬಳಿ ಕೂಡ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಯಿತು. ಇನ್ನು ಅಲಿಗಢದಲ್ಲಿ ಕೂಡ ಪುರುಷ ಮತ್ತು ಮಹಿಳೆಯರು ಸರ್ಕಾರದ ನಿರ್ಧಾರ ವಿರೋಧಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಹಾರಾಷ್ಟ್ರದಲ್ಲೂ ಈ ಸಂಬಂಧ ದೊಡ್ಡ ಮಟ್ಟದ ಪ್ರತಿಭಟನೆ ಕಾಣುತ್ತಿದೆ.
ಓವೈಸಿ ಟ್ವೀಟ್ ದಾಳಿ: ಇನ್ನು ಈ ಘಟನೆ ಕುರಿತು ಮಾತನಾಡಿರುವ ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಟ್ವಿಟರ್ನಲ್ಲಿ ಈ ಕುರಿತು ಹರಿಹಾಯ್ದಿರುವ ಅವರು, ಭಾರತ ಅಲ್ಪ ಸಂಖ್ಯಾತರಿಗೆ ಸ್ವರ್ಗ ಎಂದು ಬಿಜೆಪಿ ಹೇಳುತ್ತದೆ. ಆದರೆ, ಇಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ. ಜೈನರ ಪೂಜ್ಯನೀಯ ಸ್ಥಳವನ್ನು ಗುರಿಯಾಗಿಸಲಾಗಿದೆ. ಕ್ರಿಸ್ಮಸ್ ಆದಾಗಿನಿಂದ ಕಿಶ್ಚಿಯನ್ನರ ಮೇಲೆ ನಿರಂತರ ದಾಳಿ ಆಗುತ್ತಿದೆ. ಲಡಾಖ್‌ನಲ್ಲಿ ಪೂರ್ಣ ರಾಜ್ಯತ್ವಕ್ಕಾಗಿ ಬೌದ್ಧರು ಮತ್ತು ಶಿಯಾಗಳು ರಸ್ತೆಗಿಳಿದಿದ್ದಾರೆ. ಉತ್ತರ ಪ್ರದೇಶದಲ್ಲಿ ಸಿಖ್ಖರ ಮೇಲೆ ದಾಳಿಯಾಗುತ್ತಿದೆ. ಅಸ್ಸೋಂನಲ್ಲಿ ಸಾವಿರಾರು ಮುಸ್ಲಿಂರು ನಿರ್ಗತಿಕರಾಗಿದ್ದಾರೆ ಎಂದಿದ್ದಾರೆ.
ಜೈನ ತೀರ್ಥಂಕರ ಮೋಕ್ಷ ಸ್ಥಳ: ಸಮ್ಮೇದ್ ಶಿಖರ್ಜಿ ಜೈನ ಧರ್ಮದ ಎರಡೂ ಪಂಗಡಗಳಾದ ದಿಗಂಬರ ಮತ್ತು ಶ್ವೇತಾಂಬರರಿಗೆ ಅತಿದೊಡ್ಡ ಯಾತ್ರಾ ಸ್ಥಳವಾಗಿದೆ. 24 ಜೈನ ತೀರ್ಥಂಕರರಲ್ಲಿ 20 ಮಂದಿ ಇಲ್ಲಿ ಧ್ಯಾನ ಮಾಡಿದ ನಂತರ ಮೋಕ್ಷವನ್ನು ಸಂಪಾದಿಸಿದರು ಎಂದು ನಂಬಲಾಗಿದೆ. ಈ ಕ್ಷೇತ್ರವನ್ನು ಪ್ರವಾಸೋದ್ಯಮವಾಗಿ ಮಾಡಿದರೆ, ಇಲ್ಲಿನ ಪಾವಿತ್ರತ್ಯತೆಗೆ ಧಕ್ಕೆಯಾಗುತ್ತದೆ ಎಂಬುದು ಜೈನ ಸಮುದಾಯಸ್ಥರ ವಾದ
ಇದನ್ನೂ ಓದಿ: ಶ್ರೀ ಸಮ್ಮೇದ್ ಶಿಖರ್ಜಿಗಾಗಿ ಜಾರ್ಖಂಡ್ ಸರ್ಕಾರದ ವಿರುದ್ಧ ಉಪವಾಸ ಕುಳಿತ ಜೈನ ಸನ್ಯಾಸಿ ನಿಧನ