ಮದ್ರಾಸ್ ಹೈಕೋರ್ಟ್ ಕಳೆದ ವಾರ ತನ್ನ ವಿರುದ್ಧ ನೀಡಿದ ಕಠೋರ ಹೇಳಿಕೆಗಳ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ನೋವಾಗಿದ್ದರೂ ಅದು ನ್ಯಾಯಾಮೂರ್ತಿಗಳ ಮೌಖಿಕ ಅಭಿಪ್ರಾಯವನ್ನು ತಡೆಯಲು ಮತ್ತು ನ್ಯಾಯಾಲಯಗಳಲ್ಲಿ ನಡೆಯುವ ಚರ್ಚೆಗಳನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ನಿರ್ಬಂಧಿಸಲು ಹೊರಟದ್ದು ತನ್ನ ಪ್ರಕರಣವನ್ನು ದುರ್ಬಲಗೊಳಿಸಿತು.
ಹೈಕೋರ್ಟ್‌ನ ಹೇಳಿಕೆ ಮತ್ತು ಮಾಧ್ಯಮಗಳನ್ನು ನಿಗ್ರಹಿಸಬೇಕು ಎಂಬ ಇಸಿಐ ಧೋರಣೆಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು. ಅರ್ಜಿ ವಿಲೇವಾರಿ ಮಾಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ನ್ಯಾಯಾಲಯಗಳಿಗೆ ಮುಕ್ತ ಪ್ರವೇಶಾವಕಾಶ ನೀಡುವುದು ʼಸಾಂವಿಧಾನಿಕ ಸ್ವಾತಂತ್ರ್ಯದ ಮೂಲಾಧಾರ ʼ ಎನಿಸಿಕೊಂಡಿದೆ. ಅಂತರ್ಜಾಲ ಎಂಬುದು ನ್ಯಾಯಾಲಯ ವರದಿಗಾರಿಕೆಯನ್ನು ಕ್ರಾಂತಿಕಾರಕವಾಗಿಸಿದ್ದು, ನೈಜ ಸಮಯದ ವರದಿಗಾರಿಕೆ, ವಾಕ್ ಸ್ವಾತಂತ್ರ್ಯದ ಭಾಗವಾಗಿದೆ ಮತ್ತು ಮುಕ್ತ ನ್ಯಾಯಾಂಗದ ವಿಸ್ತರಣೆಯೂ ಆಗಿದೆ ಎಂದು ಹೇಳಿತು. ಹಾಗೆಂದೇ ಅದು ನ್ಯಾಯಾಲಯ ವರದಿಗಾರಿಕೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಡೆ ಒಡ್ಡುವ ಆಯೋಗದ ಯತ್ನಕ್ಕೆ ಕಡಿವಾಣ ಹಾಕಿತು.
ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸದೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಪ್ರಚಾರ ನಡೆಸಲು ಅನುವು ಮಾಡಿಕೊಟ್ಟದ್ದು ಏಕೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳನ್ನು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದರು. ಆಯೋಗ ಬೇಜವಾಬ್ದಾರಿಯಾಗಿ ನಡೆದುಕೊಂಡಿದೆ ಎಂಬುದನ್ನು ವಿವರಿಸುತ್ತಾ ನ್ಯಾಯಮೂರ್ತಿಗಳು ಚುನಾವಣಾ ಆಯೋಗದ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದರು. ನ್ಯಾಯಮೂರ್ತಿಗಳು ನುಡಿದ ʼತಾಳ್ಮೆ ಮೀರಿದ ಭಾಷೆ ʼಯಿಂದಾಗಿ ಹತಾಶಗೊಂಡ ಇಸಿಐ, ಹೈಕೋರ್ಟ್ ಟೀಕೆಗಳನ್ನು ನಿರ್ಬಂಧಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತು.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ನೇತೃತ್ವದ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಿದ ಆರಂಭಿಕ ಅವಲೋಕನಗಳು ಇಲ್ಲಿ ಉಲ್ಲೇಖನಾರ್ಹವಾಗಿವೆ. ಯಾವುದೇ ಬಗೆಯ ತಡೆಯಾಜ್ಞೆ ನೀಡಿ ನಾವು ಹೈಕೋರ್ಟ್‌ಗಳ ಸ್ಥೈರ್ಯಗೆಡಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ನ್ಯಾಯವಾದಿ ವರ್ಗ ಮತ್ತು ನ್ಯಾಯಪೀಠದ ನಡುವೆ ನಡೆಯುವ ಚರ್ಚೆ, ನ್ಯಾಯಾಲಯದಲ್ಲಿ ಏನಾಗಿದೆ ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ನ್ಯಾಯವಾದಿ ವರ್ಗ ಮತ್ತು ನ್ಯಾಯಪೀಠದ ನಡುವೆ ನಡೆಯುವ ಇಂತಹ ಸಂವಾದ, ನ್ಯಾಯ ವ್ಯವಸ್ಥೆಯನ್ನು ಬೆಳೆಸುತ್ತದೆ.
ಕೊನೆಯದಾಗಿ ನ್ಯಾಯಾಲಯ ಕೋವಿಡ್ -19 ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಹೈಕೋರ್ಟ್‌ಗಳು ಶ್ಲಾಘನೀಯ ಪಾತ್ರ ನಿರ್ವಹಿಸಿವೆ ಎಂದು ಹೇಳಿತು. ಆದರೂ ಮದ್ರಾಸ್ ಹೈಕೋರ್ಟ್ ಮಾಡಿದ ಟೀಕೆ ಕಠೋರವಾಗಿತ್ತು. ಆ ಕ್ಷಣದ ಹೇಳಿಕೆಗಳನ್ನು ನೀಡುವಾಗ ನ್ಯಾಯಾಂಗ ಮಿತಿ ಅನುಸರಿಸುವುದು ಅಗತ್ಯ ಎಂದು ತಿಳಿಸಿತು. ಮಾಧ್ಯಮಗಳು ನ್ಯಾಯಾಲಯಗಳ ಮೌಖಿಕ ಹೇಳಿಕೆಗಳನ್ನು ಪ್ರಕಟಿಸದಂತೆ ನಿರ್ಬಂಧಿಸಬೇಕು ಎನ್ನುವ ಆಯೋಗದ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದಿತು. ಆದರೆ, ಆಯೋಗ ತಾನು ಚುನಾವಣೆ ವೇಳೆ ಆಡಳಿತ ನಿರ್ವಹಿಸುವುದಿಲ್ಲ. ಕೇವಲ ಮಾರ್ಗಸೂಚಿಗಳನ್ನು ನೀಡಿ ಅವುಗಳನ್ನು ಕಾರ್ಯಗತಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ತಿಳಿಸುವುದಾಗಿ ಇಸಿಐ ಪರವಾಗಿ ವಾದ ಮಂಡನೆಯಾಯಿತು. ಒಂದು ವೇಳೆ ನಿಯಮಗಳ ಉಲ್ಲಂಘನೆಯಾಗಿದ್ದರೆ, ಅದಕ್ಕೆ ಆಯೋಗ ಹೊಣೆಯಲ್ಲ ಎಂದು ಅದು ಸಮರ್ಥಿಸಿಕೊಂಡಿತು. ಈ ವಾದ ಸಂಪೂರ್ಣ ದೋಷಯುಕ್ತವಾಗಿದೆ.
ಚುನಾವಣಾ ಆಯೋಗ ರಾಜ್ಯಗಳಲ್ಲಿ ಚುನಾವಣೆ ನಡೆಯುವಾಗ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುತ್ತದೆ. ಮಾರ್ಚ್ 9ರಂದು ಒಂದು ಆದೇಶ ಹೊರಡಿಸಿ, ಪಶ್ಚಿಮ ಬಂಗಾಳ ಡಿಜಿಪಿ ಅವರನ್ನು ಅದು ವರ್ಗಾವಣೆ ಮಾಡಿತ್ತು. ಆ ಸ್ಥಾನಕ್ಕೆ ಬೇರೊಬ್ಬ ಅಧಿಕಾರಿಯನ್ನು ತಂದು ಕೂರಿಸಿತ್ತು. ಆದರೆ, ಈಗ ತಾನು ಆಡಳಿತ ನಡೆಸುವುದಿಲ್ಲ ಎಂದು ಹೇಳುತ್ತಿದೆ. ಮುಂದುವರೆದು ಮತದಾನದ ದಿನಾಂಕ ನಿಗದಿಪಡಿಸಲು ಅಥವಾ ಸಂದರ್ಭ ಬಂದರೆ ಅದನ್ನು ಮುಂದೂಡಲು ಅಧಿಕಾರ ಹೊಂದಿರುವ, ಚುನಾವಣೆ ಘೋಷಣೆಯಾದ ದಿನದಿಂದಲೂ ರಾಜ್ಯ ಸರ್ಕಾರದ ಕೆಲಸ ಕಾರ್ಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಆಯೋಗ, ಈಗ ರಾಜ್ಯ ಸರ್ಕಾರಗಳು ತನ್ನ ಮಾರ್ಗಸೂಚಿ ಅನುಸರಿಸಿದಿದ್ದರೆ ಏನೂ ಮಾಡಲಾಗದು ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದೆ.
ನಾಗರಿಕರು ಮುಕ್ತವಾಗಿ ಮತದಾನ ಮಾಡುವ ಹಕ್ಕು ಹೊಂದಿದ್ದಾರೆಯೇ ಮತ್ತು ಅವರ ಮುಕ್ತ ಹಾಗು ನ್ಯಾಯಯುತ ಮತದಾನದ ಹಕ್ಕು ಆಯೋಗವನ್ನು ಮುನ್ನಡೆಸುತ್ತಿರುವ ಅಧಿಕಾರಿಗಳ ಕೈಯಲ್ಲಿ ಸುರಕ್ಷಿತವಾಗಿ ಇದೆಯೇ ಎಂದು ಯಾರಿಗಾದರೂ ಅಚ್ಚರಿ ಆಗುತ್ತದೆ. ಸುಪ್ರೀಂಕೋರ್ಟ್ ಎದುರು ವಾದ ಮಂಡಿಸುವಾಗ ಚುನಾವಣಾ ಆಯೋಗದ ಧೋರಣೆ ಮತ್ತು ಮಾಧ್ಯಮ ನಿರ್ಬಂಧ ವಿಚಾರದಲ್ಲಿ ಅದು ನಡೆದುಕೊಂಡ ರೀತಿ ಸಂವಿಧಾನ ರಚಿಸಿದವರು ತಮ್ಮ ಗೋರಿಗಳಲ್ಲೇ ಉಳಿಯುವಂತೆ ಮಾಡಿದೆ. ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳನ್ನು ಓದಿದಾಗ ದೇಶದ ಸಂಸ್ಥಾಪಕರು ಹೇಗೆ ಇಸಿಐಯನ್ನು ಮುಕ್ತ ಮತ್ತು ಸ್ವಾಯತ್ತ ಸಂಸ್ಥೆಯಾಗಿ ರೂಪಿಸಲು ಯತ್ನಿಸಿದರು. ಹೇಗೆ ಸಂವಿಧಾನದ 324ನೇ ವಿಧಿ ರಚಿಸಿ ಮುಖ್ಯ ಚುನಾವಣಾ ಆಯುಕ್ತರಿಗೆ ವಜ್ರ ಕವಚ ನೀಡಿದರು. 324 (5)ನೇ ವಿಧಿಯ ರೂಪದಲ್ಲಿ ಅವರಿಗೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಸರಿಸಮನಾದ ಸ್ಥಾನ ಕಲ್ಪಿಸಿ ನಿರ್ಭೀತವಾಗಿ ಮತ್ತು ಶ್ರದ್ಧೆಯಿಂದ ಪ್ರಜೆಗಳ ಮತದಾನದ ಹಕ್ಕಿನ ರಕ್ಷಣೆಗೆ ಮತ್ತು ದೇಶದ ಪ್ರಜಾಸತ್ತೆ ಪ್ರಕ್ರಿಯೆಯನ್ನು ಸದೃಢಗೊಳಿಸಲು ಹೇಗೆ ಅನುವು ಮಾಡಿಕೊಟ್ಟರು ಎಂಬುದು ವೇದ್ಯವಾಗುತ್ತದೆ. ಇದಲ್ಲದೆ, 324ನೇ ವಿಧಿಯನ್ನು ಸರಳವಾಗಿ ಓದಿಕೊಂಡರೂ ಕೂಡ ಆಯೋಗಕ್ಕೆ ನೀಡಲಾಗಿರುವ ಚುನಾವಣೆಯ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣ ತಿಳಿದು ಇಸಿಐನ ತಾನು ಅಸಹಾಯಕ ಎಂಬ ವಾದವನ್ನು ಕೆಡವಿ ಹಾಕುತ್ತದೆ.
ನರೇಂದ್ರ ಮೋದಿ ಸರ್ಕಾರದ ಕುರಿತು ಆಗಾಗೆ ಪ್ರಯೋಗ ಆಗುತ್ತಿರುವ ಬಾಣಗಳಲ್ಲಿ ಸರ್ಕಾರ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಿದ್ದು, ಇಸಿಐ ಮೇಲೆ ಪ್ರಭಾವ ಬೀರಲು ಅದು ಇಚ್ಛಿಸುತ್ತಿದೆ ಎಂಬುದು ಈ ಆರೋಪದ ಸತ್ಯಾಸತ್ಯತೆ ಬಗ್ಗೆ ಲೇಖಕನಿಗೆ ಮಾಹಿತಿ ಇಲ್ಲ. ಆದರೆ, ಮೊರಾರ್ಜಿ ದೇಸಾಯಿ, ಚರಣ್ ಸಿಂಗ್ ಹಾಗು ಇಂದಿರಾ ಗಾಂಧಿ ಅವರು ಅಧಿಕಾರದಲ್ಲಿದ್ದಾಗ ಚುನಾವಣಾ ಆಯೋಗದ ನೇತೃತ್ವ ವಹಿಸಿದ್ದ ಎಸ್.ಎಲ್.ಶಖ್ದರ್, ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ವೇಳೆ ಆಯೋಗದ ಚುಕ್ಕಾಣಿ ಹಿಡಿದಿದ್ದ ಆರ್.ವಿ .ಎಸ್.ಪೆರಿ ಶಾಸ್ತ್ರಿ ಹಾಗು ಚಂದ್ರಶೇಖರ್ ಪ್ರಧಾನಿಯಾಗಿದ್ದಾಗ ರಾಜೀವ್ ಗಾಂಧಿ ಅವರ ಸೂಚನೆ ಮೇರೆಗೆ ಅಧಿಕಾರಕ್ಕೆ ಬಂದ ಟಿ.ಎನ್.ಶೇಷನ್ ಅವರನ್ನೇ ಉದಾಹರಣೆಯಾಗಿ ತೆಗೆದುಕೊಂಡರೂ ಪ್ರತಿ ಸರ್ಕಾರ ಕೂಡ ಮುಖ್ಯ ಚುನಾವಣಾ ಆಯುಕ್ತರು ಹಾಗು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಹೇಳಬಹುದು. ಅಲ್ಲದೆ, ಪ್ರತಿಯೊಂದು ಸರ್ಕಾರ ಕೂಡ ಯಾವುದೇ ದೊಡ್ಡ ಚುನಾವಣೆ ಎದುರಾದಾಗ ಮತದಾನದ ದಿನ, ಚುನಾವಣೆಯ ಹಂತಗಳು ಹಾಗು ಕೇಂದ್ರದ ಪಡೆಗಳ ನಿಯೋಜನೆ ಕುರಿತಂತೆ ಪ್ರಾಥಮಿಕವಾಗಿ ತನ್ನ ಆಶಯ ಪಟ್ಟಿ ಸಲ್ಲಿಸುತ್ತದೆ ಎಂದು ಊಹಿಸುವುದು ಸಮಂಜಸವಾಗಿದೆ. ಇಸಿಐ ಜೊತೆಗಿನ ಈ ಸಂವಹನ ಔಪಚಾರಿಕವಾಗಿದ್ದು ಉಳಿದದ್ದು ಅನೌಪಚಾರಿಕವಾಗಿರುತ್ತದೆ. ಆದರೆ, ಮತದಾನದ ದಿನಾಂಕ ನಿಗದಿ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರ ತನ್ನ ನಿಲುವನ್ನು ಹೇಳಿದರೂ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಬೇಕಿರುವ ಆಯೋಗ ತನ್ನದೇ ಆದ ಮಾರ್ಗ ಹಿಡಿಯಬೇಕು. ಈ ಸಮತೋಲನ ಹಳಿ ತಪ್ಪಿದರೆ ಇದು ಜನರಿಗೆ ಅರಿವಾಗಿ ಅವರು ಪ್ರಶ್ನೆಗಳನ್ನು ಕೇಳಲಾರಂಭಿಸುತ್ತಾರೆ. ಸರ್ಕಾರಕ್ಕೆ ಅಲ್ಲ, ಬದಲಿಗೆ ಚುನಾವಣಾ ಆಯೋಗಕ್ಕೆ. ಆಗ ಆಯೋಗ ಉತ್ತರ ನೀಡಲು ಬದ್ಧವಾಗಿ ಇರಬೇಕು.
ಪ್ರಸ್ತುತ ಸಂದರ್ಭದಲ್ಲಿ ಇಸಿಐ ತೆಗೆದುಕೊಂಡ ಅತ್ಯಂತ ವಿವಾದಾತ್ಮಕ ನಿರ್ಧಾರ ಪಶ್ಚಿಮ ಬಂಗಾಳದಲ್ಲಿ ( 294 ವಿಧಾನಸಭಾ ಕ್ಷೇತ್ರಗಳು ) ಎಂಟು ಹಂತದ ಸಮೀಕ್ಷೆಗೆ ಸಂಬಂಧಿಸಿದ್ದಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಏಪ್ರಿಲ್ 6ರಂದು ತಮಿಳುನಾಡು (234 ಕ್ಷೇತ್ರಗಳು), ಕೇರಳ (140 ಸ್ಥಾನಗಳು) ಹಾಗು ಪುದುಚೆರಿಯಲ್ಲಿ (30 ಕ್ಷೇತ್ರಗಳು) ಒಂದೇ ಹಂತದಲ್ಲಿ ಚುನಾವಣೆ ನಡೆದವು. ಅದೇ ದಿನ ಅಸ್ಸಾಂನಲ್ಲಿ 40 ಸ್ಥಾನಗಳ ಮೂರನೇ ಹಂತದ ಚುನಾವಣೆ ನಡೆಯಿತು. ಬೇರೆ ರೀತಿಯಲ್ಲಿ ಹೇಳುವುದಾದರೆ ಇಸಿ ಐ ವಿವಿಧ ರಾಜ್ಯಗಳ 444 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಸಿತು. ಆದರೆ, ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ ಮಾತ್ರ ಎಂಟು ಹಂತಗಳ ಮತದಾನ ನಡೆಸಿತು. ಇದು ಏನನ್ನು ಸಮರ್ಥಿಸುತ್ತದೆ ? ಚುನಾವಣಾ ಆಯೋಗ ಉತ್ತರ ನೀಡಬೇಕು. ಈ ಮಧ್ಯೆ ಏಪ್ರಿಲ್ ಮೊದಲ ವಾರದಲ್ಲಿ ಕೋವಿಡ್ ಏರಿಕೆ ಪ್ರಮಾಣ ಪ್ರತಿದಿನ ಸರಾಸರಿ ಒಂದು ಲಕ್ಷ ದಾಟಿತು. ಆದರೆ, ತನ್ನೆದುರೇ ನಿಂತಿದ್ದ ಆ ರಕ್ಕಸ ಇಸಿಐ ಕಣ್ಣಿಗೆ ಕಾಣಲಿಲ್ಲ. ಮದ್ರಾಸ್ ಹೈಕೋರ್ಟ್ ಟೀಕಾ ಪ್ರಹಾರ ಮಾಡಿದ ನಂತರವಷ್ಟೇ ಅದು ಅಂತಿಮವಾಗಿ ಅರೆ ಮನಸ್ಸಿನ ಕ್ರಮಗಳನ್ನು ಕೈಗೊಂಡಿತು. ಇಷ್ಟಾದರೂ ಹೈಕೋರ್ಟ್‌ನಂತೆಯೇ ಮತ್ತೊಂದು ಸಾಂವಿಧಾನಿಕ ಸಂಸ್ಥೆಯಾದ ತನ್ನ ವಿರುದ್ಧ ಉಚ್ಚ ನ್ಯಾಯಾಲಯ ಹೇಳಿಕೆಗಳನ್ನು ನೀಡಬಾರದಿತ್ತು ಎಂದು ಅದು ಪ್ರಲಾಪಿಸುತ್ತಿದೆ. ಇಸಿಐನ ಈ ವಾದದಲ್ಲಿ ಇನ್ನೊಂದು ನ್ಯೂನತೆ ಇದೆ. ಅದು ತನ್ನನ್ನು ತಾನು ಹೈಕೋರ್ಟ್‌ಗೆ ಸಮೀಕರಿಸಿಕೊಳ್ಳಲು ಯತ್ನಿಸುತ್ತಿದೆ. ಇದು ಅಸಂಬದ್ಧ. ಇಸಿಐ ಸೇರಿದಂತೆ ಎಲ್ಲಾ ಸಂಸ್ಥೆಗಳಿಗೆ ಆದೇಶ ನೀಡಲು, ಅರ್ಜಿಗಳನ್ನು ಪುರಸ್ಕರಿಸಲು ಹೈಕೋರ್ಟ್‌ಗಳಿಗೆ ಸಂವಿಧಾನ ಅಧಿಕಾರ ನೀಡಿದೆ. ಇಸಿಐ ಇದನ್ನೆಲ್ಲಾ ಮಾಡುವಂತಿಲ್ಲ. ಹೈಕೋರ್ಟ್‌ಗಳ ನ್ಯಾಯವ್ಯಾಪ್ತಿಯನ್ನು ಇಸಿಐ ಒಪ್ಪಿ ಗೌರವಿಸಬೇಕು.
ದೇಶದ ಸಂಸ್ಥೆಗಳ ಕಾರ್ಯ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸುವರ ಮನಸ್ಸಿನಲ್ಲಿ ಏಳುವ ಪ್ರಶ್ನೆಗಳು ಇವು. ಆದ್ದರಿಂದ ಪ್ರಜಾಪ್ರಭುತ್ವವನ್ನು ಜಾರಿಗೆ ತರುವ ಉದ್ದೇಶದಿಂದ ಕಾರ್ಯ ನಿರ್ವಹಿಸಬೇಕಾದ ಪ್ರಧಾನ ಸಾಂವಿಧಾನಿಕ ಸಂಸ್ಥೆಯೊಂದು ತನ್ನ ಕೆಲಸಗಳ ಬಗ್ಗೆ ಚರ್ಚಿಸಲು ಅಡ್ಡಿ ಉಂಟು ಮಾಡುವುದು ವಿಚಿತ್ರ ಎನಿಸುತ್ತದೆ. ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಪೀಠ ಅವಲೋಕನ ಮಾಡಿರುವಂತೆ ಪ್ರಜಾಪ್ರಭುತ್ವ ಉಳಿಯಲು ಸಂಸ್ಥೆಗಳು ಬಲಿಷ್ಠ ಮತ್ತು ಸ್ಪಂದನಾಶೀಲವಾಗಿ ಇರಬೇಕು. ಈ ಬಗ್ಗೆ ಭಿನ್ನ ಅಭಿಪ್ರಾಯಗಳು ಇರಬಾರದು.