ಹೈದರಾಬಾದ್ : 2019ರಲ್ಲಿ ಉದ್ಯಮಿಯೊಬ್ಬರ 43 ವರ್ಷದ ಪತ್ನಿಯ ಮನೆ ಮೇಲೆ ದಾಳಿ ನಡೆಸಿದ ಐವರು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಅಧಿಕಾರಿಗಳು ಶೋಧ ಕಾರ್ಯಾಚರಣೆ ನಂತರ ಆಕೆಯನ್ನ ವಶಕ್ಕೆ ಪಡೆದು ಬೆದರಿಕೆ ಹಾಕಿದ್ದಲ್ಲದೇ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಳೆದ ವಾರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಫೆಬ್ರವರಿ 27, 2019ರಂದು ನನ್ನ ಪತಿ ವಿದೇಶದಲ್ಲಿದ್ದಾಗ ಜಿಎಸ್‌ಟಿ ಅಧಿಕಾರಿಗಳು ಎಂದು ಹೇಳಿಕೊಂಡು ಐದು ಜನರು ನಮ್ಮ ಮನೆಗೆ ನುಗ್ಗಿದ್ದರು. ಯಾವುದೇ ಸರ್ಚ್ ವಾರೆಂಟ್ ತೋರಿಸದೆ ಏಕಾಏಕಿ ಮನೆಗೆ ನುಗ್ಗಿ ಶೋಧ ಕಾರ್ಯ ಪ್ರಾರಂಭಿಸಿದರು.
ಮನೆಯಲ್ಲಿ ಏನೂ ಸಿಗದ ನಂತರ ಓರ್ವ ಮಹಿಳಾ ಜಿಎಸ್‌ಟಿ ಅಧಿಕಾರಿ ಬಲವಂತವಾಗಿ ನನ್ನನ್ನು ಕಚೇರಿಗೆ ಕರೆದೊಯ್ದು ಮರುದಿನ ಮುಂಜಾನೆ 4 ಗಂಟೆಯವರೆಗೆ ತಮ್ಮ ವಶದಲ್ಲಿರಿಸಿಕೊಂಡರು. ಬಳಿಕ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳು ತನಗೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿ 5 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಜಿಎಸ್‌ಟಿ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್ 354, 341 ಮತ್ತು 506ರ ಕ್ರಿಮಿನಲ್ ಬೆದರಿಕೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಅಪ್ಪನ ಹಣ ಕದ್ದು, ಕೋಟಾ ನೋಟು ಇಟ್ರು.. 25 ದಿನದಲ್ಲಿ 4 ಲಕ್ಷ ಖರ್ಚು ಮಾಡಿದ್ರು 8-9 ವರ್ಷದ ಅಣ್ತಮ್ಮ!