ಬಾರಾಮುಲ್ಲಾ (ಜಮ್ಮು -ಕಾಶ್ಮೀರ) : ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ದಮನ ಕಾರ್ಯಾಚರಣೆ ಜೋರಾಗಿಯೇ ನಡೆಸಿರುವ ಭದ್ರತಾ ಪಡೆಗಳು ಮಂಗಳವಾರ ಓರ್ವ ಉಗ್ರ, ಆತನ ಸಹಾಯಕರು ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ ಇಬ್ಬರು ಮಹಿಳೆಯರು ಮತ್ತು ಓರ್ವ ಯುವಕ ಕೂಡ ಇದ್ದಾನೆ. ಬಂಧಿತರಿಂದ ಹ್ಯಾಂಡ್ ಗ್ರೆನೇಡ್, ಪಿಸ್ತೂಲ್, ಮದ್ದುಗುಂಡುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಬಾರಾಮುಲ್ಲಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಪೊಲೀಸರು, ಬಾರಾಮುಲ್ಲಾ, ನಾಗ್ಪುರಿ, ಥಾಪರ್ಪಟ್ಟನ್ ಪ್ರದೇಶಗಳಲ್ಲಿ ಉಗ್ರ ಚಟುವಟಿಕೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಐವರನ್ನು ಬಂಧಿಸಲಾಗಿದೆ. ಇವರು ನಿಷೇಧಿತ ಉಗ್ರ ಸಂಘಟನೆಯಾದ ಲಷ್ಕರ್ ಎ ತೊಯ್ಬಾದ ಉಗ್ರರಿಗೆ ನೆರವು ನೀಡುತ್ತಿದ್ದರು. ಇವರಿಂದ ಶಸ್ತ್ರಾಸ್ತ್ರಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಒರವಿಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ವಶಕ್ಕೆ ಪಡೆಯಲಾಗಿತ್ತು. ಅದಾದ ಬಳಿಕ ಈಗ ಐವರನ್ನು ಬಂಧಿಸಲಾಗಿದೆ. ಬಂಧಿತ ಭಯೋತ್ಪಾದಕ ಸಹಚರರಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಅಪ್ರಾಪ್ತನೂ ಇದ್ದಾನೆ. ಮನೆಗಳಿಂದ ಕಾಣೆಯಾಗಿದ್ದ ಇವರು, ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಎಲ್ಇಟಿ, ಟಿಆರ್ಎಫ್ಗೆ ಸೇರಿ ಉಗ್ರ ಚಟುವಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ದಾಳಿಯಲ್ಲಿ ಈಗ ಸಿಕ್ಕಿಬಿದ್ದಿದ್ದಾರೆ ಎಂದು ಮಾಹಿತಿ ನೀಡಿದರು.
ಬಾರಾಮುಲ್ಲಾ ಪೊಲೀಸರು, ಭಾರತೀಯ ಸೇನೆ ಮತ್ತು ಸಿಎಪಿಎಫ್ನ ಜಂಟಿ ತಂಡಗಳ ದಾಳಿಯಲ್ಲಿ ಈಚೆಗೆ ಸೆರೆಯಾಗಿದ್ದ ಉಗ್ರನೊಬ್ಬ ನೀಡಿದ ಮಾಹಿತಿಯ ಮೇರೆಗೆ ಇವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಭಾರೀ ಶಸ್ತ್ರಾಸ್ತ್ರಗಳ ವಶ : ಬಂಧಿತರಿಂದ 2 ಪಿಸ್ತೂಲ್, 4 ಪಿಸ್ತೂಲ್ ಮ್ಯಾಗಜೀನ್, 2 ಪಿಸ್ತೂಲ್ ಸೈಲೆನ್ಸರ್, 5 ಚೈನೀಸ್ ಗ್ರೆನೇಡ್ ಹಾಗೂ 29 ಜೀವಂತ ಗುಂಡು, 4 ಹ್ಯಾಂಡ್ ಗ್ರೆನೇಡ್‌ಗಳು ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಉಗ್ರ ಮತ್ತು ಆತನ ಐವರು ಸಹಚರರೊಂದಿಗೆ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದರು. ಮತ್ತಷ್ಟು ಭಯೋತ್ಪಾದಕರನ್ನು ನೇಮಿಸಿ ಬಾರಾಮುಲ್ಲಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಯೋಜಿಸುತ್ತಿದ್ದ ಬಗ್ಗೆ ತನಿಖೆಯಿಂದ ತಿಳಿದುಬಂದಿತ್ತು.
ಪಾಕಿಸ್ತಾನ ಮೂಲದ ಭಯೋತ್ಪಾದಕರ ಆದೇಶದ ಮೇರೆಗೆ ಎಲ್ಲರೂ ಗಡಿಯಾಚೆಯಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಕಳ್ಳಸಾಗಣೆ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರಿಗೆ ಇವರೆಲ್ಲರೂ ನೆರವಾಗುತ್ತಿದ್ದರು ಎಂದು ತಿಳಿದುಬಂದಿದೆ. ಬಂಧಿತರ ವಿರುದ್ಧ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಮೂವರು ಅಧಿಕಾರಿಗಳ ಸಾವಿಗೆ ಪ್ರತೀಕಾರ: ಲಷ್ಕರ್ ಕಮಾಂಡರ್ ಉಝೈರ್ ಖಾನ್ ಸೇರಿ ಇಬ್ಬರು ಉಗ್ರರ ಹೆಡೆಮುರಿಕಟ್ಟಿದ ಸೇನೆ