ಹೈದರಾಬಾದ್: ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಊಳಿಗಾಮಾನ್ಯ ಪ್ರಭುಗಳ ವಿರುದ್ಧ ತೆಲಂಗಾಣದಲ್ಲಿ ಭೂಮಿಗಾಗಿ ಸಶಸ್ತ್ರ ಹೋರಾಟ ನಡೆಸಿದ್ದ ಹಿರಿಯ ಕ್ರಾಂತಿಕಾರಿ ನಾಯಕಿ ಮಲ್ಲು ಸ್ವರಾಜ್ಯಂ ಶನಿವಾರ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು.
ಆಂಧ್ರಪ್ರದೇಶ ವಿಧಾನಸಭೆಯ ಮಾಜಿ ಸದಸ್ಯೆಯಾಗಿದ್ದ ಮಲ್ಲು ಸ್ವರಾಜ್ಯಂ, ನಿನ್ನೆ ರಾತ್ರಿ ಸುಮಾರು 8 ಗಂಟೆಗೆ ಕೊನೆಯುಸಿರೆಳೆದರು. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಾರ್ಚ್ 1 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
1931ರಲ್ಲಿ ನಲ್ಗೊಂಡ ಜಿಲ್ಲೆಯ ತುಂಗತುರ್ತಿಯ ಕರಿವಿರಾಲ ಕೊತಗುಡೆಂ ಗ್ರಾಮದಲ್ಲಿ ಜನಿಸಿದ ಮಲ್ಲು, ಹದಿಹರೆಯದಲ್ಲಿಯೇ ಕಮ್ಯುನಿಸಂ ಸಿದ್ಧಾಂತದೆಡೆ ಆಕರ್ಷಿತರಾದರು. ಸಹೋದರ ಭೀಮರೆಡ್ಡಿ ನರಸಿಂಹ ರೆಡ್ಡಿಯಿಂದ ಪ್ರೇರಿತರಾಗಿ, ಊಳಿಗಾಮಾನ್ಯ ಪದ್ಧತಿ ವಿರುದ್ಧ ತೆಲಂಗಾಣ ಸಶಸ್ತ್ರ ಹೋರಾಟದಲ್ಲಿ (1946-51) ಭಾಗವಹಿಸಿದ್ದರು.
ಕ್ರಾಂತಿಕಾರಿ ಗೀತೆಗಳೊಂದಿಗೆ ಜನರನ್ನು ಹೋರಾಟಕ್ಕೆ ಸಜ್ಜುಗೊಳಿಸುವುದರ ಮೂಲಕ ಮಹಿಳಾ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಭೂಮಿಗಾಗಿ ಬಂದೂಕು ಹಿಡಿದು ಹೋರಾಡಿದ ಮಲ್ಲು, ಸಶಸ್ತ್ರ ಹೋರಾಟದಲ್ಲಿ ಸಕ್ರಿಯ ಪಾತ್ರವಹಿಸಿದ್ದ ಮತ್ತೊಬ್ಬ ಪ್ರಸಿದ್ಧ ಕಾಂಗ್ರೆಸ್ ನಾಯಕ ಮಲ್ಲು ವೆಂಕಟ ನರಸಿಂಹ ರೆಡ್ಡಿ ಅವರನ್ನು ವಿವಾಹವಾದರು. ನಂತರ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಕೇಂದ್ರ ಸಮಿತಿಯ ಸದಸ್ಯರಾಗಿದ್ದರು.
ಸಿಪಿಐ(ಎಂ) ಅಭ್ಯರ್ಥಿಯಾಗಿ ತುಂಗತುರ್ತಿ ವಿಧಾನಸಭಾ ಕ್ಷೇತ್ರದಿಂದ ಆಂಧ್ರಪ್ರದೇಶದ ವಿಧಾನಸಭೆಗೆ ಎರಡು ಅವಧಿಗೆ 1978 ಮತ್ತು 1983 ರಲ್ಲಿ ಚುನಾಯಿತರಾಗಿದ್ದರು.
ಗಣ್ಯರಿಂದ ಸಂತಾಪ: ರೈತಪರ ಹೋರಾಟದ ಕೇಂದ್ರವಾಗಿದ್ದ ಮಲ್ಲು ಸ್ವರಾಜ್ಯಂ ನಿಧನಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.