ಕಾಮರೆಡ್ಡಿ (ತೆಲಂಗಾಣ): ಅಪರಾಧಗಳು ಇಂದು ದೇಶದ ಮೂಲೆ ಮೂಲೆಯಲ್ಲಿ ನಡೆಯುತ್ತಿವೆ. ಆದರೆ ತೆಲಂಗಾಣದ ರಾಯಗಟ್‌ಪಲ್ಲಿ ಗ್ರಾಮ ಇದಕ್ಕೆ ವಿರುದ್ಧವಾಗಿ ಇದೆ. ಈ ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಒಂದೇ ಒಂದು ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ. ಕಾಮರೆಡ್ಡಿ-ಮೇದಕ್ ಜಿಲ್ಲೆಗಳ ಗಡಿಭಾಗದಲ್ಲಿರುವ ಜನರು ಇಂದಿಗೂ ಪೊಲೀಸ್ ಠಾಣೆಯ ಮೆಟ್ಟಿಲೇರಿಲ್ಲ.
ಸ್ವಾತಂತ್ರ್ಯ ದಿನಾಚರಣೆಯಂದು ರಾಯಗಟ್‌ಪಲ್ಲಿ ಜಿಲ್ಲಾ ನ್ಯಾಯಾಧೀಶೆ ಶ್ರೀದೇವಿ ಅವರು ಈ ಗ್ರಾಮವನ್ನು 'ವ್ಯಾಜ್ಯ ಮುಕ್ತ ಗ್ರಾಮ' ಎಂದು ಅಧಿಕೃತವಾಗಿ ಘೋಷಿಸಿದರು. ನ್ಯಾಯಾಧೀಶರು ಮಂಗಳವಾರ ಅಧಿಕೃತವಾಗಿ ಗ್ರಾಮಕ್ಕೆ ಪ್ರಮಾಣಪತ್ರ ಹಸ್ತಾಂತರಿಸಿದ್ದಾರೆ.
12 ವರ್ಷದಿಂದ ಮದ್ಯ ಮಾರಾಟ ಬಂದ್: ರಾಯಗಟ್‌ಪಲ್ಲಿ ಗ್ರಾಮದಲ್ಲಿ 930 ಜನರಿದ್ದು, 180 ಕುಟುಂಬಗಳು ವಾಸಿಸುತ್ತಿವೆ. ಈ ಗ್ರಾಮದಲ್ಲಿ ವಿವಿಧ ರಾಜಕೀಯ ಪಕ್ಷಗಳ ಸದಸ್ಯರಿದ್ದರೂ, ಅವರ್ಯಾರು ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿಲ್ಲ. ಬದಲಿಗೆ ತಮ್ಮ ಗ್ರಾಮದ ಅಭಿವೃದ್ಧಿಯತ್ತ ಗಮನಹರಿಸುತ್ತಿದ್ದಾರೆ. ಗ್ರಾಮದಲ್ಲಿ ಮದ್ಯದಂಗಡಿಗಳು 12 ವರ್ಷಗಳಿಂದ ಮುಚ್ಚಿದ್ದು, ಒಂದು ವೇಳೆ ಯಾರಾದ್ರೂ ಮದ್ಯ ಮಾರಾಟ ಮಾಡುವುದು ಕಂಡು ಬಂದಲ್ಲಿ 5 ಸಾವಿರ ರೂ.ದಂಡ ವಿಧಿಸಲಾಗುತ್ತದೆ.
ವೃದ್ಧರ ಸಂಘ: ಗ್ರಾಮದಲ್ಲಿ ಯಾರಾದ್ರು ಜಗಳ ಮಾಡಿಕೊಂಡರೆ ವಿಷಯವನ್ನು ಮೊದಲು ಪೊಲೀಸರ ಬದಲಿಗೆ ಗ್ರಾಮ ಪಂಚಾಯಿತಿಗೆ ಕೊಂಡೊಯ್ಯಲಾಗುತ್ತದೆ. 63 ಸದಸ್ಯರನ್ನು ಹೊಂದಿರುವ ವೃದ್ಧರ ಸಂಘವೂ ಗ್ರಾಮದಲ್ಲಿ ಇದೆ. ಇದು ಕೇವಲ ಗ್ರಾಮದ ವೃದ್ಧರ ಸಮಸ್ಯೆಗಳ ಬಗ್ಗೆಯೇ ಕೆಲಸ ಮಾಡುತ್ತದೆ. ಈ ಸಂಘದ ಸದಸ್ಯರು ಇಲ್ಲಿಯ ವಯೋವೃದ್ಧರು ಎದುರಿಸಬಹುದಾದ ಸಮಸ್ಯೆಗಳ ಬಗ್ಗೆ ಮನೆ ಮನೆಗೆ ತೆರಳಿ ವಿಚಾರಿಸುತ್ತಾರೆ.
ಇದನ್ನೂ ಓದಿ: ಹೈದರಾಬಾದ್ ಗಣೇಶನ ವಿಶೇಷ ಲಡ್ಡು ಹರಾಜಾದ ಬೆಲೆ ಕೇಳಿದರೆ ಬೆಚ್ಚಿ ಬೀಳ್ತೀರಿ!
ಗ್ರಾಮಸ್ಥರ ಸಮ್ಮುಖದಲ್ಲಿ ನಮಗೆ ಏನೇ ಸಮಸ್ಯೆಗಳಿದ್ದರೂ ಚರ್ಚಿಸಿ ಎರಡೂ ಕಡೆಯವರು ಒಪ್ಪುವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುತ್ತೇವೆ. ಪ್ರಕರಣ ದಾಖಲು ಮಾಡುವ ಮಟ್ಟಕ್ಕೆ ಹೋಗಿಲ್ಲ. ಇಲ್ಲಿಯವರೆಗೆ ಠಾಣೆಗೆ ಹೋಗಿ ದೂರು ನೀಡಿದವರನ್ನು ನಾವು ನೋಡಿಲ್ಲ ಎಂದು ಗ್ರಾಮಸ್ಥರೊಬ್ಬರು ಹೇಳುತ್ತಾರೆ.