ಹೈದರಾಬಾದ್ (ತೆಲಂಗಾಣ): 10 ದಿನದ ಮಗುವೊಂದರ ಮೂಗಿನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ವೈದ್ಯರು ಮಗುವಿನ ಮೂಗನ್ನ ಶಸ್ತ್ರಚಿಕಿತ್ಸೆ ಮೂಲಕ ತೆಗೆದಿದ್ದಾರೆ ಎಂದು ಸಂತ್ರಸ್ತ ಮಗುವಿನ ಕುಟುಂಬಸ್ಥರು ದೂರಿದ್ದಾರೆ.
ಮಗುವಿನ ಮೂಗನ್ನು ಯಾಕೆ ತೆಗೆಯಲಾಗಿದೆ ಎಂದು ವೈದ್ಯರನ್ನು ಮಗುವಿನ ಪೋಷಕರು ಪ್ರಶ್ನಿಸಿದ್ದು, ವೈದ್ಯರಿಂದ ಸರಿಯಾಗಿ ಉತ್ತರ ನೀಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ಶುಕ್ರವಾರ ಮಗುವನ್ನು ಡಿಸ್ಚಾರ್ಜ್ ಮಾಡುವುದಾಗಿ ತಿಳಿಸಿದ್ದಾರೆ. ವೈದ್ಯರ ಈ ಹೇಳಿಕೆಯಿಂದ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಕೊನೆಗೆ ನ್ಯಾಯಕ್ಕಾಗಿ ನಾರಾಯಣಗೌಡ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ
ಮಗುವಿನ ಮೂಗು ತೆಗೆದಿದ್ದರ ಬಗ್ಗೆ ಕುಟುಂಬಸ್ಥರು ಹೇಳುವುದೇನು? : 13 ವರ್ಷಗಳ ಬಳಿಕ ಪಟಬಸ್ತಿ ಕಾಳಪತ್ತರ್‌ನ ಇಮ್ರಾನ್ ಖಾನ್ ಮತ್ತು ಹರ್ಷನುಸ್ಸಾ ಖಾನ್ ದಂಪತಿಗೆ ಹೈದರ್‌ಗುಡಾದ ಆಸ್ಪತ್ರೆಯಲ್ಲಿ ಜೂನ್ 8 ರಂದು ಗಂಡು ಮಗು ಜನಿಸಿತ್ತು. ಈ ಮಗುವಿಗೆ ದಂಪತಿ ಫತೇ ಖಾನ್ ಎಂದು ಹೆಸರಿಟ್ಟಿದ್ದರು. ಮಗುವಿಗೆ ಉಸಿರಾಟದ ತೊಂದರೆ ಇದ್ದ ಕಾರಣ ವೈದ್ಯರು ಅದೇ ದಿನ ಮಗುವನ್ನು NICUಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು ಎಂದು ಮಗುವಿನ ತಂದೆ ಖಾನ್ ಹೇಳಿದ್ದಾರೆ.
ಮುಂದುವರೆದು ಘಟನೆ ಬಗ್ಗೆ ವಿವರಿಸಿದ ಅವರು, ಹತ್ತು ದಿನಗಳ ನಂತರ ಮಗುವನ್ನು ನೋಡಿದ ಪೋಷಕರಿಗೆ ಮಗುವಿನ ಮೂಗು ಕಪ್ಪಾಗಿರುವುದು ಕಂಡುಬಂದಿದೆ. ವೈದ್ಯರಲ್ಲಿ ಈ ಬಗ್ಗೆ ವಿಚಾರಿಸಿದಾಗ ಆಕ್ಸಿಜನ್ ನಿಂದ ಸೋಂಕು ತಗುಲಿದೆ ಎಂದು ಹೇಳಿ 18 ಸಾವಿರ ರೂ.ಮೌಲ್ಯದ ಮುಲಾಮು ತರಲು ಹೇಳಿದ್ದಾರೆ. ಆ ಬಳಿಕ ಮತ್ತೆ ಮಗುವನ್ನು ನೋಡಿದಾಗ ಆ ಮೂಗೇ ಇರಲಿಲ್ಲ. ಈ ಬಗ್ಗೆ ಪೋಷಕರು ವೈದ್ಯರನ್ನು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಆಸ್ಪತ್ರೆ ವೈದ್ಯರು, ಕಪ್ಪಾದ ಭಾಗವನ್ನು ತೆಗೆದು ಹಾಕಲಾಗಿದೆ ಎಂದು ಉತ್ತರ ನೀಡಿದ್ದಾರೆ. ಇದು ಪೋಷಕರಿಗೆ ಸಮಾಧಾನ ತಂದಿಲ್ಲ. ಅಷ್ಟೇ ಅಲ್ಲ ಅವರು ವೈದ್ಯರ ಹೇಳಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐದು ಲಕ್ಷ ರೂ ಬಿಲ್ ಮಾಡಿದ ಆರೋಪ: ಆಸ್ಪತ್ರೆಯಲ್ಲಿ ಮಗುವಿನ ಚಿಕಿತ್ಸೆಗೆ ದಿನಕ್ಕೆ 35 ಸಾವಿರ ರೂ. ಚಾರ್ಜ್ ಮಾಡಿದ್ದಾರೆ. ಇಲ್ಲಿಯವರೆಗೆ ಸಾಲ ಮಾಡಿ 5 ಲಕ್ಷ ರೂ.ಬಿಲ್ ಕಟ್ಟಿದ್ದೇವೆ ಎಂದು ಪೋಷಕರು ತಿಳಿಸಿದ್ದಾರೆ. ಮಗುವಿಗೆ ಜ್ವರ ಕಾಣಿಸಿಕೊಂಡಿದ್ದು, ಮೂಗಿನಿಂದ ನೀರು ಹರಿಯುತ್ತಿದೆ ಎಂದೂ ಆರೋಪಿಸಿದ್ದಾರೆ. ಇದಕ್ಕೆಲ್ಲ ಇಲ್ಲಿನ ವೈದ್ಯರು ಹಾಗೂ ಅವರ ವೈದ್ಯಕೀಯ ತಂಡವೇ ಕಾರಣ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.
ಆಸ್ಪತ್ರೆ ವೈದ್ಯರು ಹೇಳುವುದೇನು?: ಪೋಷಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಅಧಿಕಾರಿಗಳು, ಒಂದು ವರ್ಷದ ನಂತರ ಮೂಗು ಸರಿಪಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ಸಂಪೂರ್ಣ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾದರೆ ಮಗುವಿಗೆ 10 ವರ್ಷಗಳಾಗಬೇಕು, ಆಗ ಇದು ಸಾಧ್ಯವಾಗಲಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಈ ಬಗ್ಗೆ ದೂರು ದಾಖಲಾಗಿರುವ ಬಗ್ಗೆ ಎಸ್ಐ ಶಫಿ ಸಹ ಸ್ಪಷ್ಟಪಡಿಸಿದ್ದಾರೆ. ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ದೂರು ದಾಖಲಿಸಿಕೊಂಡಿರುವ ಅವರು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ: Brain eating amoeba: ಬಾಲಕನ ಮೆದುಳು ತಿಂದ ಅಮೀಬಾ; ಕೆರೆ, ಕೊಳದಲ್ಲಿ ಈಜುವ ಮುನ್ನ ಇರಲಿ ಎಚ್ಚರ!