ಹೈದರಾಬಾದ್: ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅನುಮತಿ ನೀಡುವಂತೆ ಒತ್ತಾಯಿಸಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಪಿಎಸ್‌ಯು, ರೈಲ್ವೆ, ರಕ್ಷಣಾ ಸೇವೆ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಹುದ್ದೆಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ನಡೆಸಲಾಗುತ್ತದೆ. ಈ ಎರಡೂ ಭಾಷೆಗಳನ್ನು ಅಧ್ಯಯನ ಮಾಡದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಇದರಿಂದ ಅನಾನುಕೂಲವಾಗುತ್ತಿದೆ. ಇದು ಕೇವಲ ಹಿಂದಿ ರಾಜ್ಯಗಳಿಗೆ ಅನುಕೂಲ ಅಷ್ಟೆ. ಉಳಿದ ರಾಜ್ಯಗಳ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದು ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭಾರತದ ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳಿಗೆ ಸಮಾನ ಮತ್ತು ನ್ಯಾಯಯುತವಾದ ಅವಕಾಶ ಒದಗಿಸುವ ಸಲುವಾಗಿ ಅಭ್ಯರ್ಥಿಗಳಿಗೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅನುಮತಿ ನೀಡಬೇಕು. ಯುಪಿಎಸ್‌ಸಿ ಮತ್ತು ರೈಲ್ವೆ ನೇಮಕಾತಿ ಮಂಡಳಿಗಳು, ಸಾರ್ವಜನಿಕ ವಲಯದ ಬ್ಯಾಂಕ್ಗಳು, ಆರ್‌ಬಿಐ, ಸಿಬ್ಬಂದಿ ಆಯ್ಕೆ ಆಯೋಗ ಹೀಗೆ ಎಲ್ಲ ಏಜೆನ್ಸಿಗಳು ಅನುಮತಿ ನೀಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.